ಹೊಸದಿಲ್ಲಿ :ದೇಶದಲ್ಲಿ ಆರು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಸೇರಿದಂತೆ ದೇಶದ ಒಟ್ಟು ಜನಸಂಖ್ಯೆಯ ಸುಮಾರು ಮೂರನೇ ಒಂದರಷ್ಟು ಜನರು ಇನ್ನೂ ಕೋವಿಡ್-19ಸೋಂಕಿನ ಅಪಾಯಕ್ಕೆ ಸಿಲುಕಬಹುದಾಗಿದೆ ಎಂಬುದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ನಡೆಸಿದ ನಾಲ್ಕನೇ ಸಮೀಕ್ಷೆಯೊಂದರಲ್ಲಿ ಕಂಡುಕೊಳ್ಳಲಾಗಿದೆ ಎಂದು ಕೇಂದ್ರ ಸರಕಾರ ಮಂಗಳವಾರ ಹೇಳಿದೆ. ಈ ಸಮೀಕ್ಷಾ ಫಲಿತಾಂಶ ಭಾರತದ ಪಾಲಿಗೊಂದು ಆಶಾಕಿರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಮೈಮರೆವು ಸಲ್ಲದೆಂದೂ ಎಚ್ಚರಿಸಿದ್ದಾರೆ.
ಈ ಸಮೀಕ್ಷೆಯಲ್ಲಿ ಕಂಡುಬಂದ ಪ್ರಕಾರ, ಜೂನ್-ಜುಲೈಯಲ್ಲಿ ನಡೆಸಿದ ರಾಷ್ಟ್ರೀಯ ಸೆರೊ ಸರ್ವೇಯಲ್ಲಿ ಆರು ವರ್ಷಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯ ಶೇ.67.6ರಷ್ಟು ಜನರಲ್ಲಿ ಸಾರ್ಸ್-ಕೋವ್-2ಪ್ರತಿಕಾಯಗಳು ಕಂಡುಬಂದಿದೆ.ಮೊದಲ ಬಾರಿ ಆರು ವರ್ಷದ ಮೇಲ್ಪಟ್ಟ ಮಕ್ಕಳನ್ನೂ ಸಮೀಕ್ಷೆಯಲ್ಲಿ ಒಳಪಡಿಸಲಾಗಿದೆ.ಒಟ್ಟು ಆಯ್ದ 70ಜಿಲ್ಲೆಗಳಲ್ಲಿ ಇಂತಹ ಸಮೀಕ್ಷೆ ನಡೆಸಲಾಗಿದೆ.
ಹಾಗೆಯೇ 6-9ವರ್ಷದ ಮಕ್ಕಳ ಪೈಕಿ ಶೇ.57.2ಮಂದಿಯಲ್ಲಿ ಸೆರೊ ಪಾಸಿಟಿವಿಟಿ ಪ್ರಮಾಣ ಕಂಡುಬಂದಿದ್ದರೆ, 10-17ರ ವಯಸ್ಸಿನ ಮಕ್ಕಳಲ್ಲಿ ಶೇ.61.6ರಷ್ಟು ಕಂಡುಬಂದಿದೆ.18-44ರ ಪ್ರಾಯದವರಲ್ಲಿ ಶೇ.66.7ರಷ್ಟು ಮತ್ತು 45-60ರ ವಯೋಮಾನದವರಲ್ಲಿ ಶೇ.77.6ರಷ್ಟು ಕಂಡುಬಂದಿದೆ.
ಶೇ.85ರಷ್ಟು ಆರೋಗ್ಯ ಕಾರ್ಯಕರ್ತರಲ್ಲಿ ಸಾರ್ಸ್-ಕೋವ್-2ವಿರುದ್ಧದ ಪ್ರತಿಕಾಯಗಳು ಕಂಡುಬಂದಿದ್ದರೆ, ಹತ್ತನೇ ಒಂದು ಭಾಗದಷ್ಟು ಹೆಲ್ತ್ ಕೇರ್ ಕಾರ್ಯಕರ್ತರು (ಎಚ್ಸಿಡಬ್ಲ್ಯೂ) ಇನ್ನೂ ಲಸಿಕೆ ಪಡೆದಿಲ್ಲ . ಒಟ್ಟಾರೆಯಾಗಿ ಸುಮಾರು 40ಕೋಟಿಯಷ್ಟು ಜನ ಇನ್ನೂ ಕೊರೋನಾ ಸೋಂಕಿಗೆ ತುತ್ತಾಗುವ ಅಪಾಯವಿದೆ ಎಂಬುದು ಸಮೀಕ್ಷೆಯಲ್ಲಿ ಕಂಡುಬಂದಿದೆ.28,975ಮಂದಿ ಸಾರ್ವಜನಿಕರು ಮತ್ತು 7,252 ಆರೋಗ್ಯ ಕಾರ್ಯಕರ್ತರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಆದಾಗ್ಯೂ ಈ ಸಮೀಕ್ಷೆಯ ಫಲಿತಾಂಶ ಒಂದು ಬೆಳ್ಳಿರೇಖೆಯಾಗಿ ಗೋಚರಿಸುತ್ತಿದೆ . ಹಾಗೆಂದು ಯಾವುದೇ ಕಾರಣಕ್ಕೂ ಮೈಮರೆವಿಗೆ ಅವಕಾಶವಿಲ್ಲ . ನಾವು ಕೋವಿಡ್ ನಿಯಮಗಳನ್ನು ಪಾಲಿಸಿ ಸಮುದಾಯಗಳಲ್ಲಿ ಈ ಕುರಿತಂತೆ ಜಾಗೃತಿಯನ್ನು ಕಾಯ್ದುಕೊಳ್ಳುವುದನ್ನು ಸಡಿಲಗೊಳಿಸಲಾಗದು ಎಂಬುದಾಗಿ ಐಸಿಎಂಆರ್ನ ಮಹಾನಿರ್ದೇಶಕ ಬಲರಾಮ್ ಭಾರ್ಗವ್ ಹೇಳುತ್ತಾರೆ.