ಪೋಷಕರಲ್ಲಿದ್ದ ಆತಂಕ ದೂರ, ಪರೀಕ್ಷೆ ಯಶಸ್ವಿ ಕೋವಿಡ್ ಮೆಟ್ಟಿನಿಂತ 10ರ ವಿದ್ಯಾರ್ಥಿಗಳು

• ಮೊದಲ ದಿನ ಶೇ.99.6 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು
• ಬೈಂದೂರಿನ ಇಬ್ಬರು ವಿದ್ಯಾರ್ಥಿನಿಯರಿಗೆ ಪರೀಕ್ಷೆಗೆ ಹಾಜರಾಗಲು ದೋಣಿ ವ್ಯವಸ್ಥೆ
• ಪೊಲೀಸ್ ಇಲಾಖೆಯಲ್ಲಿ ಬಡ್ತಿಗಾಗಿ 55 ವರ್ಷದ ಸಿಬ್ಬಂದಿಯೊಬ್ಬರು ಪರೀಕ್ಷೆಗೆ ಹಾಜರು
• ಕೆಲವೆಡೆ ವಿದ್ಯಾರ್ಥಿಗಳಿಗೆ ಗಣ್ಯರಿಂದ ಸ್ವಾಗತ, ಹೂಗುಚ್ಛ ನೀಡಿ ಶುಭ ಕೋರಿದ ಶಿಕ್ಷಕರು

ಬೆಂಗಳೂರು: ರಾಜ್ಯದಲ್ಲಿ ಸೋಮವಾರ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸುಸೂತ್ರವಾಗಿ ನಡೆದಿದ್ದು , ಶೇ.99.6ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದು ಕಳೆದ ವರ್ಷದ ಹಾಜರಾತಿಗಿಂತಲೂ ಹೆಚ್ಚು ಪ್ರಮಾಣದ್ದಾಗಿದ್ದು, ಕೋವಿಡ್ ಅಂಜಿಕೆಯನ್ನು ದೂರ ಮಾಡಿದೆ.

ಸೋಮವಾರ 3 ಪರೀಕ್ಷೆಗಳು ನಡೆದಿದ್ದು 8,21,883 ವಿದ್ಯಾರ್ಥಿಗಳು ಹಾಜರಾಗಿದ್ದರು. 2867 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ. ಕೆಲ ಭಾಗಗಳಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಸಣ್ಣಪುಟ್ಟ ಅವಘಡಗಳು, ಗೊಂದಲ ಘಟಿಸಿವೆ. ಕೋವಿಡ್ ಸೇರಿದಂತೆ ಇತರೆ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 111 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೋವಿಡ್ ಕಾರಣಕ್ಕಾಗಿ ತಮ್ಮ ಊರುಗಳಿಗೆ ಹಾಗೂ ವಲಸೆ ಹೋಗಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಈ ಪೈಕಿ 10,693 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ವಸತಿ ನಿಲಯಗಳಲ್ಲಿದ್ದು 2870 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ದಕ್ಷಿಣ ಕನ್ನಡ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಸೇರಿದಂತೆ ಹಲವಾರು ಗಡಿ ಭಾಗದ ಜಿಲ್ಲೆಗಳ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಕೇರಳ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಿಂದ ಒಟ್ಟು 770 ಮಕ್ಕಳು ಬಂದು ಪರೀಕ್ಷೆ ಬರೆದು ಗಮನ ಸೆಳೆದಿದ್ದಾರೆ.

ಗಣಿತ ವಿಷಯಕ್ಕೆ ಶೇ.99.64 ಹಾಜರಾತಿ (ಹಿಂದಿನ ವರ್ಷ 98.30), ವಿಜ್ಞಾನ ವಿಷಯಕ್ಕೆ ಶೇ.99.62 (ಹಿಂದಿನ ವರ್ಷ 98.36) ಹಾಗೂ ಸಮಾಜ ವಿಜ್ಞಾನ ವಿಷಯಕ್ಕೆ ಶೇ.99.65 ಹಾಜರಾತಿ (ಹಿಂದಿನ ವರ್ಷ ಇದು 98.43) ಇತ್ತು ಎಂದು ಪರೀಕ್ಷಾ ಮಂಡಳಿ ಮಾಹಿತಿ ನೀಡಿದೆ.

ಪೊಲೀಸ್ ಸಿಬ್ಬಂದಿ ಹಾಜರಿ
ಪೊಲೀಸ್ ಇಲಾಖೆಯಲ್ಲಿ ಬಡ್ತಿ ಕಾರಣಕ್ಕಾಗಿ 55 ವರ್ಷದ ಸಿಬ್ಬಂದಿಯೊಬ್ಬರು ಪರೀಕ್ಷೆ ಬರೆದಿದ್ದಾರೆ. ಕೋರಮಂಗಲದ ಮೀಸಲು ಪೊಲೀಸ್ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೋಲಾರ ಮೂಲದ ಸಿಬ್ಬಂದಿಯೊಬ್ಬರು ಸೋಮವಾರ ಪರೀಕ್ಷೆಗೆ ಹಾಜರಾಗಿದ್ದರು. ಕನ್ನಡ,ಇಂಗ್ಲಿಷ್, ಗಣಿತ ಮೂರು ವಿಷಯಗಳಿಗೆ ಮರು ಪರೀಕ್ಷೆ ಬರೆಯುತ್ತಿರುವ ಮಂಜುನಾಥ್ ಅವರನ್ನು ಸಚಿವ ಸುರೇಶ್ ಕುಮಾರ್ ಅಭಿನಂದಿಸಿದ್ದಾರೆ.

ಪರೀಕ್ಷಾರ್ಥಿಗಳಿಗೆ ವಿಭಿನ್ನ ಸ್ವಾಗತ
ರಾಜ್ಯದ ಹಲವೆಡೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಆಗಮಿಸುತ್ತಿದ್ದ ವಿದ್ಯಾರ್ಥಿಗಳನ್ನು ಶಿಕ್ಷಕರು, ಸ್ಥಳೀಯ ನಾಯಕರುಗಳು ವಿಭಿನ್ನ ರೀತಿಯಲ್ಲಿ ಸ್ವಾಗತಿಸಿದ್ದಾರೆ. ಹಾಸನದಲ್ಲಿ ಶಾಸಕ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ವಿದ್ಯಾರ್ಥಿಗಳಿಗೆ ಜಹಾಂಗೀರ್ ನೀಡುವ ಮೂಲಕ ಪರೀಕ್ಷೆಗೆ ಶುಭ ಕೋರಿದ್ದಾರೆ. ಶೃಂಗೇರಿ ಶಾಸಕ ರಾಜೇಗೌಡ ಅವರು ವಿದ್ಯಾರ್ಥಿಗಳಿಗೆ ಬಿಸ್ಕತ್ತು, ಮಾಸ್ಕ್, ಸ್ಯಾನಿಟೈಸರ್ ನೀಡುವ ಮೂಲಕ ಪರೀಕ್ಷೆಗೆ ಶುಭ ಕೋರಿದ್ದಾರೆ. ಮೈಸೂರು ಮತ್ತು ಬಾಗಲಕೋಟೆಯಲ್ಲಿ ವಿದ್ಯಾರ್ಥಿಗಳಿಗೆ ಗುಲಾಬಿ ನೀಡುವ ಮೂಲಕ ಪರೀಕ್ಷೆಗೆ ಸ್ವಾಗತಿಸಿದರೆ, ಬೀದರ್ ಜಿಲ್ಲೆಯಲ್ಲಿ ಚಪ್ಪಾಳೆ ತಟ್ಟುವ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಸ್ವಾಗತಿಸಿದ್ದಾರೆ.

ಪರೀಕ್ಷಾ ಕೇಂದ್ರದಲ್ಲಿ ಅಗ್ನಿ
ಮಂಗಳೂರಿನ ತೊಕ್ಕೊಟ್ಟು ಎಂಬಲ್ಲಿ ಖಾಸಗಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಅಗ್ನಿ ಕಾಣಿಸಿಕೊಂಡಿತ್ತು. ಇದರಿಂದಾಗಿ 36 ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿ ಪರೀಕ್ಷೆ ನಡೆಯಲು ಅವಕಾಶ ಮಾಡಿಕೊಡಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಲಬುರಗಿ ಜಿಲ್ಲೆಯ ಚಿಮ್ಮನಚೋಡ ಗ್ರಾಮದಲ್ಲಿ ರಾತ್ರಿಯಿಡೀ ಸುರಿದ ತೀವ್ರ ಮಳೆಯಿಂದ ಶಾಲೆಗೆ ಹಾದು ಹೋಗುವ ರಸ್ತೆಯಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿ ರಸ್ತೆ ಬಂದ್ ಆಗಿತ್ತು. ಅದನ್ನು ನಿಗದಿತ ಅವಯಲ್ಲಿ ಸರಿಪಡಿಸಲಾದ ಬಳಿಕ ಎಲ್ಲ ಮಕ್ಕಳು ರಸ್ತೆಯಲ್ಲಿ ಸಾಗಿ ಪರೀಕ್ಷೆ ಬರೆದರು.

ಮೂರು ವಿಷಯಗಳ ಪರೀಕ್ಷೆಗೆ ರಾಜ್ಯಾದ್ಯಂತ ವಿದ್ಯಾರ್ಥಿಗಳು ಶಿಸ್ತಿನಿಂದ ಬಂದು ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಸ್ಥಳೀಯ ಶಾಸಕರು, ಡಿಸಿಗಳು ತೆರಳಿ ವೀಕ್ಷಣೆ ಮಾಡಿದಲ್ಲದೇ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದಾರೆ. ನಾನು ಕೂಡ ಅನೇಕ ಪರೀಕ್ಷಾ ಕೇಂದ್ರಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಧೈರ್ಯ ಹೇಳುವುದಲ್ಲದೇ ಪರಿಸ್ಥಿತಿಯನ್ನು ಪರಿಶೀಲಿಸಿರುವೆ.
ಸುರೇಶ್‍ಕುಮಾರ್, ಶಿಕ್ಷಣ ಸಚಿವ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ