ಕೋವಿಡ್‍ನ ಮೂರನೆ ಅಲೆ ಆಗಸ್ಟ್ ತಿಂಗಳಿನಲ್ಲಿ ಎದುರಾಗಲಿದೆ ಎಂದು ಹೈದರಾಬಾದ್ ಮತ್ತು ಕಾನ್ಪುರ ಐಐಟಿಗಳ ತಜ್ಞರು ಮುನ್ಸೂಚನೆ

ನವದೆಹಲಿ, ಆ.2- ಕೋವಿಡ್‍ನ ಮೂರನೆ ಅಲೆ ಆಗಸ್ಟ್ ತಿಂಗಳಿನಲ್ಲಿ ಎದುರಾಗಲಿದೆ ಎಂದು ಹೈದರಾಬಾದ್ ಮತ್ತು ಕಾನ್ಪುರ ಐಐಟಿಗಳ ತಜ್ಞರು ಮುನ್ಸೂಚನೆ ನೀಡಿದ್ದಾರೆ.

ಪ್ರತಿ ದಿನ ಕನಿಷ್ಠ ಒಂದರಿಂದ ಒಂದೂವರೆ ಲಕ್ಷ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಗಣಿತ ಶಾಸ್ತ್ರದ ಅಧ್ಯಯನ ಆದರಿಸಿ ಎಚ್ಚರಿಕೆ ನೀಡಿದ್ದಾರೆ.

ಹೈದರಾಬಾದ್‍ನ ಐಐಟಿನ ಮತುಕುಮ್ಮುವಲ್ಲಿ ವಿದ್ಯಾ ಸಾಗರ್, ಕಾನ್ಪುರ್ ಐಐಟಿನ ಮಹೇಂದ್ರ ಅಗರ್‍ವಾಲ್ ನೇತೃತ್ವದಲ್ಲಿ ಸಮೀಕ್ಷೆಗಳು ನಡೆದಿದ್ದು , ಸರ್ಕಾರಕ್ಕೆ ಹಲವಾರು ಸಲಹೆಗಳು ಮತ್ತು ಎಚ್ಚರಿಕೆಗಳನ್ನು ನೀಡಲಾಗಿದೆ.

ಈ ಮೊದಲು ಇದೇ ತಂಡ ಕೋವಿಡ್ ಎರಡನೆ ಅಲೆ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಎದುರಾಗಲಿದೆ. ಸಾವಿರಾರು ಮಂದಿ ಜೀವ ಕಳೆದುಕೊಳ್ಳುತ್ತಾರೆ ಎಂದು ಮುನ್ಸೂಚನೆ ನೀಡಿತ್ತು.

ಅದರಂತೆ ಕೋವಿಡ್ ಎರಡನೆ ಅಲೆಯಿಂದ ಭಾರಿ ಹಾನಿ ಕೂಡ ಆಗಿದೆ. ಈಗ ಮೂರನೆ ಅಲೆಯ ಬಗ್ಗೆ ಮುನ್ಸೂಚನೆ ನೀಡಿರುವ ತಜ್ಞರ ತಂಡ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಉಲ್ಬಣಗೊಳ್ಳಲಿದೆ. ಆದರೆ ಎರಡನೆ ಅಲೆಗಿಂತಲೂ ಮೂರನೆ ಅಲೆ ದುರ್ಬಲವಾಗಿರಲಿದೆ. ಸರ್ಕಾರ ಲಸಿಕಾ ಅಭಿಯಾನವನ್ನು ತೀವ್ರಗೊಳಿಸಬೇಕು. ನಿಗಾವಣೆ ವ್ಯವಸ್ಥೆಯನ್ನು ಜಾಗೃತವಾಗಿಡಬೇಕು. ಸೂಕ್ಷ್ಮ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಡಬೇಕು ಎಂದು ಸಲಹೆ ನೀಡಿದೆ.

ಎಸ್‍ಬಿಐ ಸಂಶೋಧಕರ ತಂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಆಗಸ್ಟ್ ತಿಂಗಳ ಕೊನೆಯಲ್ಲಿ ಕೋವಿಡ್ ಮೂರನೆ ಅಲೆ ಅಪ್ಪಳಿಸಲಿದೆ. ಮತ್ತು ಅಕ್ಟೋಬರ್ ವೇಳೆಗೆ ಉತ್ತುಂಗಕ್ಕೇರಲಿದೆ ಎಂದು ಹೇಳಿದೆ.

ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳಲ್ಲಿ ದೇಶದ ಒಟ್ಟು ಸೋಂಕಿನ ಶೇ.83.12ರಷ್ಟು ಪ್ರಕರಣಗಳು ವರದಿಯಾಗುತ್ತವೆ. ಕೇರಳ ಒಂದರಲ್ಲೇ ಶೇ.51ರಷ್ಟು ಪ್ರಕರಣಗಳು ದಾಖಲಾಗುತ್ತವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ