ರಾಜಕಾರಣದಲ್ಲಿನ ಅಪರಾಧಿಕರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ವಿಭಾಗೀಯ ಪೀಠಗಳು ಇಂದು ನೀಡಿರುವ ಎರಡು ಮಹತ್ವದ ಆದೇಶಗಳು ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿವೆ.

ನವದೆಹಲಿ, ಆ.10- ರಾಜಕಾರಣದಲ್ಲಿನ ಅಪರಾಧಿಕರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ವಿಭಾಗೀಯ ಪೀಠಗಳು ಇಂದು ನೀಡಿರುವ ಎರಡು ಮಹತ್ವದ ಆದೇಶಗಳು ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿವೆ.

ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್, ಬಿ.ಆರ್.ಗಾವಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಮೊದಲು ನೀಡಿದ್ದ ಆದೇಶವನ್ನು ಪರಿಷ್ಕರಣೆ ಮಾಡಿದ್ದು, ರಾಜಕೀಯ ಪಕ್ಷಗಳು ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಎರಡು ದಿನಗಳ ಒಳಗಾಗಿ ಅವರ ಕ್ರಿಮಿನಲ್ ಪ್ರಕರಣಗಳ ಪೂರ್ವಾಪರ ಮಾಹಿತಿಯನ್ನು ಬಹಿರಂಗ ಪಡಿಸಬೇಕು ಎಂದು ತಾಕೀತು ಮಾಡಿದೆ.

ಬಿಹಾರ ವಿಧಾನ ಸಭೆ ಚುನಾವಣೆ ಸಂದರ್ಭವಾದ 2020ರ ಫೆಬ್ರವರಿ 13ರಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಅಭ್ಯರ್ಥಿಗಳು ತಮ್ಮ ಕ್ರಿಮಿನಲ್ ಹಿನ್ನೆಲೆಗಳ ಬಗ್ಗೆ 48 ಗಂಟೆಗಳಲ್ಲಿ ಬಹಿರಂಗ ಪಡಿಸಬೇಕು ಅಥವಾ ನಾಮಪತ್ರ ಸಲ್ಲಿಸುವ ಎರಡು ವಾರಗಳ ಮೊದಲು ಪ್ರಕಟಿಸಬೇಕು ಎಂದು ಸೂಚಿಸಿತ್ತು. ಆದರೆ ಅದನ್ನು ಅಭ್ಯರ್ಥಿಗಳಾಗಲಿ ಅಥವಾ ರಾಜಕೀಯ ಪಕ್ಷಗಳಾಗಲಿ ಸಮರ್ಪಕವಾಗಿ ಪಾಲನೆ ಮಾಡಿಲ್ಲ. ಆದ್ದರಿಂದ ನ್ಯಾಯಾಂಗ ನಿಂದನೆ ಅಡಿ ಕ್ರಮ ಜರುಗಿಸುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

ಇಂದು ಅದರ ವಿಚಾರಣೆ ನಡೆಸಿದ ನ್ಯಾಯಪೀಠ, ಹಿಂದಿನ ಆದೇಶವನ್ನು ಪರಿಷ್ಕರಣೆ ಮಾಡಲಾಗಿದೆ. ರಾಜಕೀಯ ಪಕ್ಷಗಳೇ ತಮ್ಮ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆಯ ಬಗ್ಗೆ 48 ಗಂಟೆಗಳ ಒಳಗೆ ಮಾಹಿತಿಗಳನ್ನು ಕಡ್ಡಾಯವಾಗಿ ಪ್ರಕಟಿಸಬೇಕು. ರಾಜಕೀಯ ಪಕ್ಷಗಳು ತಮ್ಮ ವೆಬ್‍ಸೈಟ್‍ನಲ್ಲಿ ಮತ್ತು ಎರಡು ಪತ್ರಿಕೆಗಳಲ್ಲಿ ಮಾಹಿತಿಯನ್ನು ಪ್ರಕಟಿಸಿ, ಅದನ್ನು ಚುನಾವಣಾ ಆಯೋಗಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ 72 ಗಂಟೆಗಳ ಒಳಗೆ ಸಲ್ಲಿಸಬೇಕು ಎಂದು ಸೂಚಿಸಿದೆ.

ದೇಶದ ರಾಜಕೀಯದಲ್ಲಿ ಕ್ರಿಮಿನಲ್ ಚಟುವಟಿಕೆಗಳು ಹೆಚ್ಚುತ್ತಿರುವುದು ಎಚ್ಚರಿಕೆಯ ಗಂಟೆಯಾಗಿದೆ ಎಂದು ತೀರ್ಪಿನಲ್ಲಿ ನ್ಯಾಯಮೂರ್ತಿ ನಾರಿಮನ್ ಅವರು ಉಲ್ಲೇಖಿಸಿದ್ದು, ಕಳೆದ ನಾಲ್ಕು ಸಾರ್ವತ್ರಿಕ ಚುನಾವಣೆಗಳಿಂದೀಚೆಗೆ ಕ್ರಿಮಿನಲ್ ಚಟುವಟಿಕೆಗಳು ಹೆಚ್ಚಾಗಿವೆ. 2004ರಲ್ಲಿ ಶೇ.24ರಷ್ಟು ಸಂಸತ್ ಸದಸ್ಯರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದರು. 2009ರಲ್ಲಿ ಶೇ.30ರಷ್ಟು, 2014ರಲ್ಲಿ ಶೇ.34ರಷ್ಟು, 2019ರಲ್ಲಿ ಶೇ.43ರಷ್ಟು ಸಂಸದರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಅವರ ವಿರುದ್ಧ ವಿಚಾರಣೆ ನಡೆಯುತ್ತಿದೆ. ರಾಜಕೀಯದಲ್ಲಿ ಏನು ಮಾಡಿದರು ನಡೆಯುತ್ತದೆ ಎಂಬುದನ್ನು ಸಹಿಸಲು ಸಾಧ್ಯವಿಲ್ಲ ಹೇಳಿದ್ದಾರೆ.

ಸುಪ್ರೀಂಕೋರ್ಟ್‍ನ ಈ ತೀರ್ಪನ್ನು ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಸ್ವಾಗತಿಸಿವೆ.
ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರನ್ನೊಳಗೊಂಡ ವಿಭಾಗೀಯ ಪೀಠ ಇಂದು ಮತ್ತೊಂದು ಮಹತ್ವದ ಆದೇಶ ನೀಡಿದ್ದು, ಶಾಸಕರು, ಸಂಸದರು ಸೇರಿದಂತೆ ಶಾಸನ ರಚನೆಯ ಜವಾಬ್ದಾರಿ ನಿರ್ವಹಿಸುವ ಪ್ರತಿನಿಧಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ವಿಚಾರಣಾ ಹಂತದಲ್ಲಿ ಹಿಂಪಡೆಯುವಂತಿಲ್ಲ ಎಂದು ಆದೇಶಿಸಿದೆ.

2016ರಲ್ಲಿ ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ಶಾಸಕರು, ಸಂಸದರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ತ್ವರಿತ ವಿಲೇವಾರಿ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಮತ್ತು ಕ್ರಿಮಿನಲ್ ಹಿನ್ನೆಲೆಯುಳ್ಳವರನ್ನು ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧಿಸಬೇಕು ಎಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹಿರಿಯ ವಕೀಲರಾದ ವಿಜಯ ಹನ್ಸಾರಿಯಾ ಮತ್ತು ವಕೀಲರಾದ ಸ್ನೇಹ ಕಲಿತ ಅವರ ವರದಿಯನ್ನು ಪರಿಶೀಲಿಸಿದ ಬಳಿಕ ನ್ಯಾಯಮೂರ್ತಿ ವೀನಿತ್ ಶರಣ್, ಸೂರ್ಯ ಕಾಂತ್ ಅವರನ್ನು ಒಳಗೊಂಡ ಮುಖ್ಯನ್ಯಾಯಮೂರ್ತಿಗಳ ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿದೆ.

ಹೈಕೋರ್ಟ್‍ನ ಪೂರ್ವಾನುಮತಿ ಇಲ್ಲದೆ ಶಾಸಕರು, ಸಂಸದರ ವಿರುದ್ಧ ಸಿಆರ್‍ಪಿಸಿ ಅಡಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವಂತಿಲ್ಲ ಎಂದು ಅಡ್ವೋಕೆಟ್ ಜನರಲ್ ಅವರಿಗೆ ಸೂಚಿಸಿದೆ.

ಜನಪ್ರತಿನಿಧಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಪೈಕಿ ಎಷ್ಟನ್ನು ವಿಶೇಷ ನ್ಯಾಯಾಲಯಗಳು ವಿಲೇವಾರಿ ಮಾಡಿವೆ. ಬಾಕಿ ಎಷ್ಟಿವೆ, ಯಾವ ಹಂತದಲ್ಲಿವೆ ಎಂಬ ಮಾಹಿತಿಯನ್ನು ನಿರ್ದಿಷ್ಟ ನಮೂನೆಯಲ್ಲಿ ನೀಡುವಂತೆ ಎಲ್ಲಾ ಹೈಕೋರ್ಟ್‍ಗಳ ರಿಜಿಸ್ಟ್ರಾರ್ ಅವರಿಗೆ ಸುಪ್ರೀಂಕೋರ್ಟ್ ಸೂಚಿಸಿದೆ. ಜೊತೆಯಲ್ಲಿ ಇಂತಹ ಪ್ರಕರಣಗಳ ವಿಚಾರಣೆಗೆ ತ್ವರಿತ ವಿಲೇವಾರಿ ನ್ಯಾಯಾಲಯ ಸ್ಥಾಪಿಸುವುದು ಮತ್ತು ವಿಚಾರಣೆಯ ಮೇಲೆ ನೇರ ನಿಗಾವಣೆ ಇಡುವ ಇಂಗಿತವನ್ನು ಸುಪ್ರೀಂಕೋರ್ಟ್ ವ್ಯಕ್ತಪಡಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ