ಹೊಸದಿಲ್ಲಿ: ಕೊರೋನಾ 3ನೇ ಅಲೆಯ ಬಗ್ಗೆ ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಎಚ್ಚರಿಕೆ ಜಾಗತಿಕ ಎಚ್ಚರಿಕೆಯಾಗಿದ್ದು, ಭಾರತದಲ್ಲಿ 3ನೇ ಅಲೆ ಶುರುವಾಗಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಲು ಮುಂದಿನ 100 ದಿನಗಳು ನಿರ್ಣಾಯಕವಾಗಿದೆ ಎಂದು ನೀತಿ ಆಯೋಗದ (ಆರೋಗ್ಯ) ಸದಸ್ಯ ವಿ.ಕೆ.ಪೌಲ್ ಹೇಳಿದ್ದಾರೆ.
ಜಗತ್ತು ಕೊರೋನಾ 3ನೇ ಅಲೆಯತ್ತ ಸಾಗುತ್ತಿರುವುದು ಸತ್ಯ. ಪ್ರಧಾನಿ ನರೇಂದ್ರ ಮೋದಿ ಕೂಡ ಈ ಬಗ್ಗೆ ನಮಗೆ ಎಚ್ಚರಿಕೆ ನೀಡಿದ್ದು, ಇದನ್ನು ತಡೆಗಟ್ಟಲು ಹಲವಾರು ಕ್ರಮಗಳು, ಗುರಿಗಳ ಬಗ್ಗೆಯೂ ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಅಲ್ಲದೇ, ದೇಶದಲ್ಲಿ ಎಲ್ಲರೂ ಇನ್ನೂ ಲಸಿಕೆ ಪಡೆಯಲಾಗಿಲ್ಲ, ರೋಗ ನಿರೋಧಕ ಶಕ್ತಿಯೂ ಎಲ್ಲರಲ್ಲಿ ಹೆಚ್ಚಿಲ್ಲ. ಆದರೂ ಸದ್ಯದ ಮಟ್ಟಕ್ಕೆ ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿದೆ ನಾವು ಇದೇ ಪರಿಸ್ಥಿತಿಯಲ್ಲಿ ಮುನ್ನಡೆಯಬೇಕಿದೆ ಎಂದಿದ್ದಾರೆ.
ಜತೆಗೆ ಕೊರೋನಾ ಅಲೆಗಳನ್ನು ನಾವು ಹೇಗೆ ನಿಭಾಯಿಸುತ್ತೇವೆ ಎಂಬುದರ ಮೇಲೆ ಅದರ ತೀವ್ರತೆಯೂ ನಿಂತಿದೆ. ಈ ಹಿನ್ನೆಲೆ ಜನರು ಜಾಗರೂಕರಾಗಿರಬೇಕು. ಮುಂದಿನ 100 ದಿನಗಳು ಸಂಭವನಿಯ 3ನೇ ಅಲೆ ನಿರ್ಧರಿಸಲು ನಿರ್ಣಾಯಕವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಎಲ್ಲ ರಾಷ್ಟ್ರಗಳಿಗೆ ಕೊರೋನಾ ಮುಂದಿನ ಅಲೆಗಳ ಭೀಕರತೆಯ ಬಗ್ಗೆ ಎಚ್ಚರಿಕೆ ನೀಡಿದೆ.