ಆಡಳಿತಾರೂಢ ಸರ್ಕಾರದ ವೈಫಲ್ಯಗಳ ವಿರುದ್ಧ ಮುಗಿ ಬೀಳಬೇಕಾಗಿದ್ದ ಕಾಂಗ್ರೆಸ್ ತನ್ನ ಒಳಜಗಳಗಳಿಂದ ಪ್ರಬಲ್ಯ ಕಳೆದುಕೊಳ್ಳುತ್ತಿದೆ

ಬೆಂಗಳೂರು, ಜು.14- ಆಡಳಿತಾರೂಢ ಸರ್ಕಾರದ ವೈಫಲ್ಯಗಳ ವಿರುದ್ಧ ಮುಗಿ ಬೀಳಬೇಕಾಗಿದ್ದ ಕಾಂಗ್ರೆಸ್ ತನ್ನ ಒಳಜಗಳಗಳಿಂದ ಪ್ರಬಲ ಪ್ರತಿಪಕ್ಷವಾಗುವ ಅವಕಾಶವನ್ನು ಕಳೆದುಕೊಳ್ಳುತ್ತಿದೆ ಎಂಬ ಆಕ್ಷೇಪಗಳು ಕೇಳಿಬರುತ್ತಿವೆ.

ಬೆಲೆ ಏರಿಕೆ, ಕೊರೊನಾ ಸಂಕಷ್ಟ, ಮಳೆ ಹಾನಿ, ಉದ್ಯೋಗ ನಷ್ಟ, ಆರ್ಥಿಕ ಮುಗ್ಗಟ್ಟು ಸೇರಿದಂತೆ ನಾನಾ ರೀತಿಯ ಸಮಸ್ಯೆಗಳಿಂದ ಜನ ಬಳಲುತ್ತಿದ್ದಾರೆ. ಸರ್ಕಾರದಿಂದ ನಿರೀಕ್ಷಿತ ನೆರವಾಗಲಿ, ಯೋಜನೆಗಳಾಗಲಿ ಸಿಗದೆ ಕಂಗಾಲಾಗಿದ್ದಾರೆ.

ಈ ಸಂದರ್ಭದಲ್ಲಿ ಸರ್ಕಾರವನ್ನು ಎಚ್ಚರಿಸಿ ಸರ್ಕಾರದ ನೆರವು ದೊರಕಿಸಬೇಕಾಗಿದ್ದ ಪ್ರತಿಪಕ್ಷ ಕಾಂಗ್ರೆಸ್, ನಾಯಕರ ಪ್ರತಿಷ್ಠೆಯಿಂದಾಗಿ ನಿಷ್ಕ್ರಿಯತೆ ಪ್ರದರ್ಶನ ಮಾಡುತ್ತಿದೆ.

ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದ ಮೇರೆಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಸೈಕಲ್ ಜಾಥಾ ಮಾಡಿದ್ದನ್ನು ಹೊರತುಪಡಿಸಿ ಸ್ಥಳೀಯ ನಾಯಕರು, ಮುಖಂಡರು ಸರ್ಕಾರದ ವಿರುದ್ಧ ಚಕಾರವೆತ್ತುತ್ತಿಲ್ಲ.

ಪ್ರತಿಪಕ್ಷವಾಗಿ ಯಾವ ರೀತಿ ಟೀಕೆ ಮಾಡಬೇಕೋ ಅಷ್ಟನ್ನೇ ಮಾಡಿ ಸೋಗಲಾಡಿತನ ಪ್ರದರ್ಶನ ಮಾಡಲಾಗುತ್ತಿದೆ. ಸರ್ಕಾರದಲ್ಲಿ ನಾನಾ ರೀತಿಯ ಭ್ರಷ್ಟಾಚಾರಗಳಿವೆ ಎಂದು ಸ್ವತಃ ಆಡಳಿತ ಪಕ್ಷದ ಶಾಸಕರು, ಸಾಮಾಜಿಕ ಕಾರ್ಯಕರ್ತರು ದಾಖಲೆಗಳ ಸಮೇತ ಬಹಿರಂಗ ಮಾಡುತ್ತಿದ್ದಾರೆ. ಆದರೆ, ಯಾವುದನ್ನೂ ಪ್ರತಿಪಕ್ಷ ಕಾಂಗ್ರೆಸ್ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ವಿಧಾನಸಭೆ ಅಧಿವೇಶನ ಕರೆದಾಗ ಅಲ್ಲಿ ಮಾತನಾಡುತ್ತೇವೆ ಎಂದು ಹೇಳುತ್ತ ಕಾಲಹರಣ ಮಾಡುತ್ತಿದ್ದಾರೆ.

ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಪ್ರತಿಪಕ್ಷದ ನಾಯಕರು ಮತ್ತು ಕೆಪಿಸಿಸಿ ಅಧ್ಯಕ್ಷರು ಜಂಟಿ ಪತ್ರಿಕಾ ಹೇಳಿಕೆ ನೀಡಿ ಆಕ್ರೋಶ ವ್ಯಕ್ತಪಡಿಸಿದರು. ಅದರ ಬಳಿಕ ಬೇರೆ ಯಾವ ವಿಷಯದಲ್ಲೂ ಅಷ್ಟು ಗಂಭೀರವಾದ ಪ್ರತಿಕ್ರಿಯೆ ಕಾಂಗ್ರೆಸ್ ನಾಯಕರಿಂದ ವ್ಯಕ್ತವಾಗಿಲ್ಲ.

ಕೋವಿಡ್‍ನಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡುವ ವಿಷಯದಲ್ಲಿ ಸಾಕಷ್ಟು ತಾರತಮ್ಯವಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಮರಣ ಪ್ರಮಾಣ ಪತ್ರವನ್ನೇ ಸರಿಯಾಗಿ ನೀಡುತ್ತಿಲ್ಲ ಎಂಬ ಆರೋಪಗಳಿವೆ. ಕಾಂಗ್ರೆಸ್ ಕೋವಿಡ್ ಸಂದರ್ಭದಲ್ಲಿ ಸಹಾಯ ಹಸ್ತ ಎಂಬ ಯೋಜನೆ ಘೋಷಿಸಿತ್ತು. ಅದರಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ ಡೆತ್ ಆಡಿಟ್ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಸಹಾಯ ಹಸ್ತ ಕಾರ್ಯಕ್ರಮ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗುತ್ತಿಲ್ಲ. ಸ್ಥಳೀಯ ಮಟ್ಟದಲ್ಲಿ ಉತ್ಸಾಹ ಕಂಡುಬಂದಿಲ್ಲ. ಈ ಕಾರ್ಯಕ್ರಮ ಜು.7ರಂದು ಉದ್ಘಾಟನೆಯಾದರೂ ಈವರೆಗೂ ತಾಲ್ಲೂಕು ಕೇಂದ್ರಗಳಿಂದ ಕಾರ್ಯಾನುಷ್ಠಾನದ ವರದಿಗಳು ಸಿಕ್ಕಿಲ್ಲ. ಇದರ ಉಸ್ತುವಾರಿಗಾಗಿ ನೇಮಿಸಿರುವ ಪದಾಧಿಕಾರಿಗಳು ದಿನಬೆಳಗಾದರೆ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಜತೆ ರಗಳೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಹಿರಿಯ ನಾಯಕರು ಸಾಂಕೇತಿಕವಾಗಿ ಕೆಲವು ಮನೆಗಳಿಗೆ ಭೇಟಿ ನೀಡಿ ಸಹಾಯ ಹಸ್ತ ಚುರುಕುಗೊಳಿಸಬೇಕಿತ್ತು. ಅದರತ್ತಲೂ ಗಮನ ಹರಿಸಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಕೇವಲ ಮುಂದಿನ ಮುಖ್ಯಮಂತ್ರಿ ವಿಷಯವಾಗಿ ಚರ್ಚೆ ಮಾಡುತ್ತ ಕಾಲಹರಣ ಮಾಡಲಾಗುತ್ತಿದೆ. ಪರಸ್ಪರ ಹೈಕಮಾಂಡ್‍ಗೆ ದೂರು ನೀಡುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ