ಟೆಸ್ಟ್, ಟ್ರ್ಯಾಕ್, ಟ್ರೀಟ್, ಲಸಿಕೆಗೆ ಒತ್ತು ನೀಡಿ: ಸಿಎಂಗಳಿಗೆ ಪ್ರಧಾನಿ ಮೋದಿ 4ಟಿ ಮಂತ್ರ

ಹೊಸದಿಲ್ಲಿ: ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ರಾಜ್ಯಗಳಲ್ಲಿ ಮೂರನೇ ಅಲೆ ತಡೆಗೆ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರು, ಟೆಸ್ಟ್, ಟ್ರ್ಯಾಕ್, ಟ್ರೀಟ್ ಮತ್ತು ಟಿಕಾ (ಲಸಿಕೆ) ಮಂತ್ರವನ್ನು ಪಾಲಿಸುವಂತೆ ಸೂಚಿಸಿದ್ದಾರೆ.

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ, ಮಹಾರಾಷ್ಟ್ರ ಮತ್ತು ಕೇರಳದ ಮುಖ್ಯಮಂತ್ರಿಗಳೊಂದಿಗಿನ ವೀಡಿಯೋ ಸಂವಾದದಲ್ಲಿ ಮಾತನಾಡಿರುವ ಅವರು, ಕಳೆದ ವಾರದ ಕೊರೋನಾ ಹೊಸ ಪ್ರಕರಣಗಳ ಪೈಕಿ ಶೇ.80, ಮೃತರಲ್ಲಿ ಶೇ.84ರಷ್ಟು ಈ ರಾಜ್ಯಗಳಿಂದ ಬಂದಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ದೇಶದಲ್ಲೇ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೊರೋನಾ ಸೋಂಕಿತರ ಏರಿಕೆ ತೀವ್ರ ಕಳವಳಕಾರಿಯಾಗಿದೆ. ಸೋಂಕು ಹೆಚ್ಚುತ್ತಿರುವ ರಾಜ್ಯಗಳು ಮೂರನೇ ಅಲೆಯ ಯಾವುದೇ ಸಾಧ್ಯತೆಯನ್ನು ತಡೆಗಟ್ಟಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ ಎಂದು ಪ್ರತಿಪಾದಿಸಿದರು.

ನಮ್ಮ ಟೆಸ್ಟ್, ಟ್ರ್ಯಾಕ್, ಟ್ರೀಟ್ ಮತ್ತು ಲಸಿಕೆ ತಂತ್ರದೊಂದಿಗೆ ನಾವು ಮುಂದುವರಿಯಬೇಕಾಗಿದೆ. ಮೈಕ್ರೊ ಕಂಟೈನ್ಮೆಂಟ್ ವಲಯಗಳ ಬಗ್ಗೆ ವಿಶೇಷ ಗಮನ ನೀಡಬೇಕಾಗಿದೆ ಎಂದಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಜನ ಗುಂಪು ಸೇರುವುದನ್ನು ತಡೆಯುವ ಅಗತ್ಯವನ್ನು ಒತ್ತಿ ಹೇಳಿದ ಮೋದಿಯವರು, ಈ ನಿಟ್ಟಿನಲ್ಲಿ ಜಾಗೃತಿ, ಎಚ್ಚರಿಕೆ ಮತ್ತು ಕಟ್ಟುನಿಟ್ಟಿನ ಕ್ರಮದ ಅವಶ್ಯಕತೆಯಿದೆ ಎಂದರು.

ನೂತನ ತೀವ್ರ ನಿಗಾ ಘಟಕ (ಐಸಿಯು) ಹಾಸಿಗೆಗಳ ವ್ಯವಸ್ಥೆ, ಪರೀಕ್ಷಾ ಸಾಮಥ್ರ್ಯವನ್ನು ಹೆಚ್ಚಿಸಲು ಮತ್ತು ಇತರ ಎಲ್ಲ ಅಗತ್ಯಗಳಿಗಾಗಿ ಎಲ್ಲಾ ರಾಜ್ಯಗಳಿಗೆ ಹಣವನ್ನು ಒದಗಿಸಲಾಗುತ್ತಿದೆ ಎಂದು ಭರವಸೆ ನೀಡಿದ್ದಾರೆ.

ಯುರೋಪ್ ಮತ್ತು ಅಮೆರಿಕದಲ್ಲಿ ಸೋಂಕಿತರ ಸಂಖ್ಯೆತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವುದು, ಭಾರತದ ಪೂರ್ವ ದಿಕ್ಕಿನ ಬಾಂಗ್ಲಾದೇಶ, ಇಂಡೋನೇಷ್ಯಾ, ಥಾಯ್‍ಲ್ಯಾಂಡ್ ಮತ್ತು ಮ್ಯಾನ್ಮಾರ್‍ನಲ್ಲೂ ಇದೇ ರೀತಿಯ ಪರಿಸ್ಥಿತಿ ಇರುವುದು ಕೊರೋನಾ ಮತ್ತೊಂದು ಅಲೆಯ ಸಂಭವನಿಯತೆಗೆ ಸಾಕ್ಷಿಯಾಗಿದೆ.

ಇದು ನಮಗೆ ಮತ್ತು ವಿಶ್ವಕ್ಕೆ ಎಚ್ಚರಿಕೆಯ ಸಂದೇಶವಾಗಿದೆ. ಕೊರೋನಾ ವೈರಾಣು ಹೋಗಿಲ್ಲ ಎಂಬುದನ್ನು ಜನರಿಗೆ ನಾವು ಸ್ಮರಿಸುತ್ತಲೇ ಇರಬೇಕು ಎಂದ ಅವರು ದೇಶವ್ಯಾಪಿ ಅನೇಕ ಸ್ಥಳಗಳಲ್ಲಿ ಜನಸಂದಣಿಯ ದೃಶ್ಯಗಳ ಬಗ್ಗೆ ಅವರ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ, ಕೇಂದ್ರ ಸರ್ಕಾರ 23,000 ಕೋಟಿ ರೂ.ಗೂ ಹೆಚ್ಚು ತುರ್ತು ಕೋವಿಡ್ -19 ಪ್ಯಾಕೇಜ್ ಬಿಡುಗಡೆ ಮಾಡಿದೆ ಎಂದು ಮೋದಿ ಗಮನಸೆಳೆದರು.

ಕೊರೋನಾ ಸೋಂಕು ಹೆಚ್ಚುತ್ತಿರುವ ರಾಜ್ಯಗಳು 3ನೇ ಅಲೆ ತಡೆಗೆ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆರೋಗ್ಯ ಮೂಲಸೌಕರ್ಯ ಖಚಿತಪಡಿಸಿಕೊಳ್ಳಬೇಕು.
ನರೇಂದ್ರ ಮೋದಿ, ಪ್ರಧಾನಿ

ಮಾಸಿಕ 1.5 ಕೋಟಿ ಡೋಸ್ ಲಸಿಕೆ ನೀಡಿ
ಬೆಂಗಳೂರು: ರಾಜ್ಯದಲ್ಲಿ ಈ ವರೆಗೆ 2.62 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು, ಪ್ರತಿದಿನ 5 ಲಕ್ಷ ಡೋಸ್‍ಗಳಂತೆ ತಿಂಗಳಿಗೆ 1.5 ಕೋಟಿ ಡೋಸ್ ಲಸಿಕೆ ಒದಗಿಸುವಂತೆ ಪ್ರಧಾನಿ ಮೋದಿಯವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮನವಿ ಮಾಡಿದರು.

ಶುಕ್ರವಾರ ಸಿಎಂಗಳೊಂದಿಗೆ ಪ್ರಧಾನಿ ಸಭೆ ನಡೆಸಿದ್ದು, ಈ ವೇಳೆ ರಾಜ್ಯದ ವಸ್ತುಸ್ಥಿತಿಯನ್ನು ಯಡಿಯೂರಪ್ಪ ವಿವರಿಸಿ, ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖವಾಗಿದ್ದು, ಪ್ರತಿನಿತ್ಯ ಪ್ರಕರಣಗಳ ಸಂಖ್ಯೆ 1900ಕ್ಕೆ ಇಳಿದಿದೆ. ಬೆಂಗಳೂರಿನಲ್ಲಿ 400ಕ್ಕೆ ಇಳಿಕೆ ಕಂಡಿದ್ದು, ಪಾಸಿಟಿವಿಟಿ ಪ್ರಮಾಣ ಶೇ.1.42ರಷ್ಟಿದೆ. ಮರಣ ಪ್ರಮಾಣ ಕೂಡ ಶೇ.1.25 ಕ್ಕೆ ಇಳಿದಿದೆ ಎಂದು ಸಿಎಂ ಮಾಹಿತಿ ನೀಡಿದರು.

ಪ್ರಸ್ತುತ 3ನೇ ಅಲೆಯನ್ನು ಎದುರಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಎಲ್ಲ ಆರೋಗ್ಯ ಸೇವಾ ಸಂಸ್ಥೆಗಳಲ್ಲಿ ಆಕ್ಸಿಜನೇಟೆಡ್ ಬೆಡ್‍ಗಳು, ವೆಂಟಿಲೇಟರ್ ಬೆಡ್‍ಗಳು ಹಾಗೂ ಮಕ್ಕಳ ಐಸಿಯುಗಳು ಮೊದಲಾದ ಸೌಲಭ್ಯ ಹೆಚ್ಚಿಸಲಾಗುತ್ತಿದೆ. ವೈದ್ಯರು, ಸ್ಟಾಫ್ ನರ್ಸ್, ಲ್ಯಾಬ್ ತಂತ್ರಜ್ಞರ ಸೇವೆ ಒದಗಿಸಲಾಗುತ್ತಿದೆ.

ಜೊತೆಗೆ ಕೋವಿಡ್ ಚಿಕಿತ್ಸೆಗೆ ಅಗತ್ಯ ಪರಿಕರಗಳನ್ನೂ ಸಹ ಸಾಕಷ್ಟು ಸಂಖ್ಯೆಯಲ್ಲಿ ಖರೀದಿಸಲಾಗುತ್ತಿದೆ. ಹೊಸ ಆರ್‍ಟಿಪಿಸಿಆರ್ ಪ್ರಯೋಗಾಲಯ ಹಾಗೂ ಜಿನೋಮ್ ಸೀಕ್ವೆನ್ಸಿಂಗ್ ಲ್ಯಾಬೊರೇಟರಿಗಳನ್ನು ಸ್ಥಾಪಿಸಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ಲಸಿಕೆ ಹಂಚಿಕೆ ಹೆಚ್ಚಳ, 800 ನಿಯೊ-ನೇಟಲ್ ಮತ್ತು ಪಿಡಿಯಾಟ್ರಿಕ್ ವೆಂಟಿಲೇಟರುಗಳನ್ನು ಪಿಎಂ-ಕೇರ್ಸ್‍ನಲ್ಲಿ ಒದಗಿಸುವಂತೆ, ಜೊತೆಗೆ, ತಾಲ್ಲೂಕು ಆಸ್ಪತ್ರೆಗಳಿಗೆ 40 ಪಿಎಸ್‍ಎ ಆಕ್ಸಿಜನ್ ಉತ್ಪಾದನಾ ಘಟಕಗಳ ಹಂಚಿಕೆ ಮಾಡುವಂತೆ ಹಾಗೂ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಹಂಚಿಕೆಯ ವಿಕೇಂದ್ರೀಕರಿಸಲು ಸಿಎಂ ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ