ಈಗ ಲಾಕ್‍ಡೌನ್ ಇಲ್ಲದಿದ್ದರೂ ಕೊರೋನಾ ವೈರಾಣು ಇದೆ | ಮರೆಯಬೇಡಿ, ಎಚ್ಚರವಹಿಸಿ ಮೋದಿ ಜಾಗೃತಿ ಕರೆ

ಹೊಸದಿಲ್ಲಿ: ಕೊರೋನಾ ವಿರುದ್ಧದ ಹೋರಾಟದಲ್ಲಿ ದೇಶ ಬಹಳಷ್ಟು ಮುಂದೆ ಸಾಗಿರಬಹುದು. ಆದರೆ ದೇಶದಲ್ಲಿ ಲಾಕ್‍ಡೌನ್ ಸಡಿಲಗೊಂಡಿದ್ದರೂ, ವೈರಾಣು ಹಾಗೆಯೇ ಉಳಿದಿದೆ ಎಂಬುದನ್ನು ಜನರು ಮರೆಯಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ್ದಾರೆ.
ಮುಂಬರುತ್ತಿರುವ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಮಂಗಳವಾರ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬ ನಾಗರಿಕನ ಸಹಕಾರದಿಂದ ಭಾರತದಲ್ಲಿ ಕಳೆದ 7-8 ತಿಂಗಳಿಂದ ಸೋಂಕು ಪರಿಸ್ಥಿತಿ ಸ್ಥಿರವಾಗಿದ್ದು, ಮತ್ತೆಂದೂ ಪರಿಸ್ಥಿತಿ ಬಿಗಡಾಯಿಸದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಮತ್ತೊಮ್ಮೆ ಚುರುಕುಪಡೆದುಕೊಂಡಿವೆ ನಿಜ. ಅಂತೆಯೇ ಜನರು ಕೂಡ ತಮ್ಮ ಕರ್ತವ್ಯ ನಿರ್ವಹಿಸಲು ಪ್ರತಿ ದಿನ ಮನೆಬಿಟ್ಟು ಹೊರ ಬರುತ್ತಿದ್ದಾರೆ. ಆದರೆ ಮಾಸ್ಕ್ ಧರಿಸದೇ ಹೊರಬಂದರೆ, ನಿಮ್ಮ ಜತೆಗೆ ನಿಮ್ಮ ಕುಟುಂಬದವರ ಜೀವನವನ್ನು ಅಪಾಯದಲ್ಲಿ ಸಿಲುಕಿಸುತ್ತಿದ್ದೀರಿ ಎಂಬುದು ನೆನಪಿರಲಿ ಎಂದು ಹೇಳಿದ್ದಾರೆ.
ಸೋಂಕು ತಡೆಗಟ್ಟಲು ದೇಶದಲ್ಲಿ ಮೊದಲು ಘೋಷಿಸಲಾಗಿದ್ದ ಜನತಾ ಕಫ್ರ್ಯೂದಿಂದ, ದೀರ್ಘಾವ ಲಾಕ್‍ಡೌನ್ ತನಕವು, ದೇಶ ಸೋಂಕು ವಿರುದ್ಧ ಹೋರಾಟದಲ್ಲಿ ಬಹಳಷ್ಟು ಮುಂದೆ ಬಂದಿದೆ. ಆದರೆ ಹಬ್ಬಗಳು ಸಮೀಪಿಸುತ್ತಿರುವ ಬೆನ್ನಲ್ಲೇ ಜನರು ಮಾರುಕಟ್ಟೆಯಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸದೇ ಹೋರಾಡುತ್ತಿರುವ ದೃಶ್ಯಾವಳಿ ಕಂಡುಬಂದಿದ್ದು, ಇದು ಸರಿಯಾದ ನಡೆಯಲ್ಲ ಎಂದು ತಿಳಿಸಿದ್ದಾರೆ.
ಅಲ್ಲದೇ ದೇಶದ ಪ್ರತಿಯೊಬ್ಬರ ಜೀವನ ಕುರಿತು ನನಗೆ ಕಾಳಜಿಯಿದ್ದು, ದಯವಿಟ್ಟು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ ಎಂದು ಕೈಮುಗಿದು ಜನರಲ್ಲಿ ಕೋರಿದ್ದಾರೆ. ಜತೆಗೆ ಕೊರೋನಾ ಮಾರ್ಗಸೂಚಿ ಕುರಿತಂತೆ ಜನರಲ್ಲಿ ಜಾಗ್ರತೆ ಮೂಡಿಸಲು ಮಾಧ್ಯಮಗಳ ಜತೆಗೆ ಜನರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಕೈಗೊಳ್ಳಬೇಕು ಎಂದು ಕರೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ