ಕೋವಿಡ್-19 ವಿರುದ್ಧ ಸಕ್ರಿಯವಾಗಿ ಹೋರಾಡಿ: ‘ಜನ ಆಂದೋಲನ’ ಅಭಿಯಾನಕ್ಕೆ ಮೋದಿ ಕರೆ

ನವದೆಹಲಿ: ಭಾರತದಲ್ಲಿ ಕೋವಿಡ್-19 ವಿರುದ್ಧದ ಹೋರಾಟ ಜನಸ್ನೇಹಿಯಾಗಿದ್ದು ಕೊರೋನಾ ವಿರುದ್ಧ ಹೋರಾಡಲು ಎಲ್ಲರೂ ಜತೆಗೂಡಿ ಸಂಘಟಿತರಾಗೋಣ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಕೋವಿಡ್ ವಾರಿಯರ್ ಗಳಿಂದ ಕೊರೋನಾ ವಿರುದ್ಧದ ಹೋರಾಟಕ್ಕೆ ಬಲ ಸಿಕ್ಕಿದೆ. ವೈರಸ್ ನಿಂದ ಜನರನ್ನು ರಕ್ಷಿಸಿ ಜೀವನದಲ್ಲಿ ಮುಂದುವರಿಯಲು ನಮ್ಮ ಈ ಹೋರಾಟ ಇನ್ನು ಕೆಲ ಸಮಯಗಳವರೆಗೆ ಮುಂದುವರಿಯಬೇಕು ಎಂದು ಪ್ರಧಾನಿ ತಮ್ಮ ಕರೆಯಲ್ಲಿ ದೇಶವಾಸಿಗಳಿಗೆ ಹೇಳಿದ್ದಾರೆ.
ಭಾರತದಲ್ಲಿ ಕೋವಿಡ್-19 ವಿರುದ್ಧದ ಹೋರಾಟ ಜನಸ್ನೇಹಿಯಾಗಿದ್ದು ಕೋವಿಡ್ ವಾರಿಯರ್ ಗಳಿಂದ ಇದಕ್ಕೆ ಹೆಚ್ಚಿನ ಬಲ ಸಿಕ್ಕಿದೆ. ನಮ್ಮ ಸಾಮೂಹಿಕ ಪ್ರಯತ್ನದಿಂದ ಹಲವು ಜೀವಗಳನ್ನು ಉಳಿಸಲು ಸಾಧ್ಯವಾಗಿದೆ. ಈ ಪ್ರಯತ್ನವನ್ನು ನಾವು ಮುಂದುವರಿಸಿ ನಾಗರಿಕರನ್ನು ಭಯಾನಕ ವೈರಸ್ ನಿಂದ ಕಾಪಾಡಬೇಕಿದೆ ಎಂದು ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಕೊರೋನಾ ಮಧ್ಯೆಯೇ ಇಂದು ಬದುಕು ಕಟ್ಟಿಕೊಳ್ಳಬೇಕಾದ ಪರಿಸ್ಥಿತಿಯಿದೆ. ಆರ್ಥಿಕ ಸಂಕಷ್ಟದ ಮಧ್ಯೆ ಹೊರಗೆ ಕೆಲಸಕ್ಕೆ ಓಡಾಡಬೇಕಾಗಿದೆ, ಹೀಗಿರುವಾಗ ನಾಗರಿಕರು ಸಾಧ್ಯವಾದಷ್ಟು ತಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು, ಮಾಸ್ಕ್ ಧರಿಸುವುದು, ಕೈ ತೊಳೆಯುತ್ತಿರುವುದು, ಎರಡು ಮೀಟರ್ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬೇಡಿ ಎಂದು ನೆನಪಿಸಿದ್ದಾರೆ.
ಏನಿದು ಜನಾಂದೋಲನ ಅಭಿಯಾನ: ಹೆಚ್ಚುತ್ತಿರುವ ಕೊರೋನಾ ಸೋಂಕಿನ ಮಧ್ಯೆ ಏನು ಮಾಡಬೇಕು, ಯಾವ ರೀತಿ ಜನರು ತಮ್ಮನ್ನು ರಕ್ಷಿಸಿಕೊಳ್ಳಬೇಕು ಎಂದು ಎಚ್ಚರಿಕೆಯಿಂದಿರುವುದೇ ಜನಾಂದೋಲನ ಅಭಿಯಾನ. ಮುಂದಿನ ಸಮಯಗಳು ಹಬ್ಬಗಳ ಋತುಗಳಾಗಿದ್ದು ಅಲ್ಲದೆ ಚಳಿಗಾಲದ ಸಮಯ ಬರುತ್ತದೆ. ಆರ್ಥಿಕತೆಯೂ ನಿಧಾನವಾಗಿ ಚೇತರಿಕೆಯಾಗುತ್ತಿದೆ. ಹೀಗಿರುವಾಗ ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿಯಾಗಿ ಅಭಿಯಾನ ಕೈಗೊಳ್ಳುವುದು ಮೋದಿಯವರ ಉದ್ದೇಶವಾಗಿದೆ. ಎಲ್ಲರೂ ಕೋವಿಡ್-19 ಪ್ರತಿಜ್ಞೆಯನ್ನು ತೆಗೆದುಕೊಂಡು ಕೇಂದ್ರ ಸರ್ಕಾರದ ಸಚಿವಾಲಯಗಳು, ಇಲಾಖೆಗಳು, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಮೂಲಾಗ್ರ ಕಠಿಣ ಕ್ರಮವನ್ನು ಜಾರಿಗೆ ತರಲು ಹೇಳಲಾಗುತ್ತದೆ.
ಅಭಿಯಾನದ ಮುಖ್ಯಾಂಶಗಳು: ಹೆಚ್ಚಿನ ಕೊರೋನಾ ಪ್ರಕರಣಗಳನ್ನು ಹೊಂದಿರುವ ಜಿಲ್ಲೆಗಳು, ಪ್ರದೇಶಗಳಲ್ಲಿ ನಿರ್ದಿಷ್ಟ ಉದ್ದೇಶಿತ ಸಂವಹನ, ಸರ್ಕಾರದ ಅಭಿಯಾನ ಪ್ರತಿಯೊಬ್ಬ ನಾಗರಿಕರನ್ನು ತಲುಪಲು ಸರಳ ಮತ್ತು ಸುಲಭವಾಗಿ ಅರ್ಥವಾಗುವ ಸಂದೇಶಗಳು, ಎಲ್ಲಾ ಮಾಧ್ಯಮ ವೇದಿಕೆಗಳನ್ನು ಬಳಸಿಕೊಂಡು ದೇಶಾದ್ಯಂತ ಪ್ರಸಾರ, ಮುಂಚೂಣಿ ಕಾರ್ಮಿಕರನ್ನು ಒಳಗೊಂಡ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್‍ಗಳು ಮತ್ತು ಪೋಲಿಸರುಗಳು ಮತ್ತು ಫಲಾನುಭವಿಗಳನ್ನು ಗುರಿಯಾಗಿಸುವುದು ಇದರ ಉದ್ದೇಶವಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ತಿಳಿಸಿದೆ.
ಈ ಅಭಿಯಾನದಲ್ಲಿ ಹೋರ್ಡಿಂಗ್ಸ್, ಗೋಡೆ ಚಿತ್ರಗಳ ಮೂಲಕ, ಸರ್ಕಾರಿ ಕಟ್ಟಡಗಳ ಆವರಣದಲ್ಲಿ ಎಲೆಕ್ಟ್ರಾನಿಕ್ ಡಿಸ್ಪ್ಲೇ ಬೋರ್ಡ್‍ಗಳು, ಸಂದೇಶವನ್ನು ಮನೆಗೆ ತಲುಪಿಸಲು ಸ್ಥಳೀಯ ಮತ್ತು ರಾಷ್ಟ್ರೀಯ ಪ್ರಭಾವಿಗಳ ಪಾಲ್ಗೊಳ್ಳುವಿಕೆ, ನಿಯಮಿತ ಜಾಗೃತಿ ಉತ್ಪಾದನೆಗೆ ಮೊಬೈಲ್ ವ್ಯಾನ್‍ಗಳನ್ನು ಚಾಲನೆ ಮಾಡುವುದು, ಜಾಗೃತಿಗಾಗಿ ಆಡಿಯೋ ಸಂದೇಶಗಳು, ಕರಪತ್ರಗಳ ಮೂಲಕ ಸಹ ಕೋವಿಡ್-19 ಬಗ್ಗೆ ಸಂದೇಶಗಳನ್ನು ಜನರಿಗೆ ರವಾನಿಸಲಾಗುತ್ತದೆ. ಕೋವಿಡ್ ಸಂದೇಶಗಳನ್ನು ಜನರಿಗೆ ತಲುಪಿಸಲು ಸ್ಥಳೀಯ ಕೇಬಲ್ ಆಪರೇಟರ್‍ಗಳ ಬೆಂಬಲವನ್ನು ಪಡೆಯುವುದು ಮತ್ತು ಪರಿಣಾಮಕಾರಿಯಾದ ಸಂಘಟಿತ ಮಾಧ್ಯಮ ಪ್ರಚಾರವನ್ನು ಒಳಗೊಂಡಿರುತ್ತದೆ.
ಕಳೆದ ಮೇ ತಿಂಗಳಲ್ಲಿ ದೇಶದಲ್ಲಿ 50 ಸಾವಿರವಿದ್ದ ಕೊರೋನಾ ಸೋಂಕಿತರ ಸಂಖ್ಯೆ ಅಕ್ಟೋಬರ್ ಗೆ 57 ಲಕ್ಷಕ್ಕೆ ತಲುಪಿದೆ. ಈ ಮಧ್ಯೆ ಗುಣಮುಖ ಹೊಂದುತ್ತಿರುವವರ ಸಂಖ್ಯೆ ಕೂಡ ಜಾಸ್ತಿಯಾಗುತ್ತಿದೆ. ಪ್ರತಿದಿನ 75 ಸಾವಿರಕ್ಕೂ ಹೆಚ್ಚು ಮಂದಿ ಗುಣಮುಖರಾಗುತ್ತಿದ್ದಾರೆ. ಪ್ರಸ್ತುತ ಸಕ್ರಿಯ ಕೇಸುಗಳು ಶೇಕಡಾ 13.4ರಷ್ಟಿದ್ದರೆ ಗುಣಮುಖರಾಗುತ್ತಿರುವವರ ಸಂಖ್ಯೆ 6.3ರಷ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಟ್ವೀಟ್ ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ