
ಬೀಜಿಂಗ್: ಕೊರೋನಾ ವೈರಸ್ಗಳು ಗಂಟಲ ಭಾಗ ಅಥವಾ ಶ್ವಾಸನಾಳದಲ್ಲಿರುವುದು ನಾಲ್ಕೈದು ದಿನ ಮಾತ್ರ, ಇವು ಸುದೀರ್ಘ ಕಾಲ ಇರೋದು ಮಲಮೂತ್ರಗಳಲ್ಲಿ. ಹಾಗಾಗಿ ಹೊರದೇಶಗಳಿಂದ ಬಂದವರು ಮತ್ತು ಸೂಕ್ಷ್ಮ ಪ್ರದೇಶಗಳ ಜನರು ಕೊರೋನಾ ಪರೀಕ್ಷೆಗೆ ಗಂಟಲ ದ್ರವ, ಮೂಗಿನ ದ್ರವ,ನಾಲಗೆಯ ಲಾಲಾರಸ,ರಕ್ತದ ಜತೆಗಿನ್ನು ಮಲದ್ವಾರದ ದ್ರವವನ್ನೂ ಕಡ್ಡಾಯ ನೀಡಬೇಕು ಎಂಬ ಹೊಸ ಆದೇಶ ಹೊರಡಿಸಿದೆ ಚೀನಾ ಆಡಳಿತ. ಸರಕಾರದ ಈ ಉಪಕ್ರಮಕ್ಕೆ ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಜಾಲತಾಣಗಳಲ್ಲಿ ಆಕ್ಷೇಪಿಸತೊಡಗಿದ್ದಾರೆ.
ಮಲಮೂತ್ರ ಪರೀಕ್ಷೆಯಿಂದ ವೈರಸ್ ಪತ್ತೆ ಪ್ರಕ್ರಿಯೆ ಹೆಚ್ಚು ನಿಖರ ಮತ್ತು ಸ್ಪಷ್ಟವಾಗಲಿದೆ. ವೈರಸ್ಗಳು ಗಂಟಲು ಅಥವಾ ಶ್ವಾಸನಾಳದಲ್ಲಿ ಅಲ್ಪಕಾಲ ಇರುವುದರಿಂದ, ಕೋವಿಡ್ ಪರೀಕ್ಷಾ ಫಲಿತಾಂಶಗಳು ಅಸ್ಪಷ್ಟವಾಗಿರುತ್ತವೆ. ಒಮ್ಮೆ ಪರೀಕ್ಷಿಸುವಾಗ ಕಂಡರೂ ಮತ್ತೊಮ್ಮೆ ಪರಿಶೀಲಿಸಿದಾಗ ಗೋಚರಿಸುವುದಿಲ್ಲ. ಅವು ಗುದದ್ವಾರದಲ್ಲಿ ದಟ್ಟೈಸಿರುತ್ತವೆ ಎಂದು ಚೀನಾದ ಆರೋಗ್ಯ ತಜ್ಞರು ಹೇಳತೊಡಗಿದ್ದಾರೆ.
ಆದರೂ ಮಲಮೂತ್ರದಲ್ಲಿನ ವೈರಸ್ಗಳಿಂದ ಕೊರೋನಾ ಸೋಂಕು ಹರಡುತ್ತದೋ ಇಲ್ಲವೋ ಎಂಬುದಿನ್ನೂ ದೃಢಪಟ್ಟಿಲ್ಲ ಎಂದು ಬೀಜಿಂಗ್ನ ಯುವಾನ್ ಆಸ್ಪತ್ರೆಯ ಸಾಂಕ್ರಾಮಿಕ ರೋಗ ವಿಭಾಗ ಉಪ ನಿರ್ದೇಶಕ ಟಾಂಗ್ಝೆಂಗ್ ಹೇಳಿದ್ದಾರೆ.
ಛೀ..ಛೀ ಹೇಸಿಗೆಯಪ್ಪಾ
ಚೀನಾದ ಆರೋಗ್ಯ ಇಲಾಖೆಯ ಹೊಸ ಪ್ರಕಟಣೆ ಕೇಳಿ ತನಗೆ ಮಾನಸಿಕವಾಗಿ ಆಘಾತವಾಗಿದೆ ಎಂದು ವಿದೇಶದಿಂದ ಬಂದು 28ದಿನ ಕ್ವಾರಂಟೈನ್ನಲ್ಲಿರುವ ಮಹಿಳೆಯೋರ್ವರು ಜಾಲತಾಣದಲ್ಲಿ ದೂರಿದ್ದಾರೆ. ಕಿರಿಕಿರಿ ಅಲ್ಲವೆಂದರೂ ಈ ತೆರ ಟೆಸ್ಟ್ ತೀರಾ ನಾಚಿಕೆಯ ವಿಚಾರವೆಂಬುದು ಇನ್ನೋರ್ವ ನೆಟ್ಟಿಗನ ಅಭಿಪ್ರಾಯ. ಮೂಗು-ಗಂಟಲ ದ್ರವ, ನಾಲಗೆಯ ಜೊಲ್ಲು, ರಕ್ತ ಪರೀಕ್ಷೆಗಳಿಂದ ಕೊರೋನಾ ವೈರಸ್ಗಳನ್ನು ಪತ್ತೆ ಮಾಡಲು ಸಾಧ್ಯವಿರುವಾಗ ಅಥವಾ ಇವು ಪರಿಣಾಮಕಾರಿ ಪರೀಕ್ಷೆಗಳಾಗಿರುವಾಗ ಮಲದ್ವಾರದ ದ್ರವ ಪರೀಕ್ಷೆ ಯಾಕೆ ಎಂದು ಇನ್ನು ಕೆಲವು ಚೀನೀಯರು ಪ್ರಶ್ನೆ ಹಾಕಿದ್ದಾರೆ.
ವುಹಾನ್ನಿಂದ ಜಗತ್ತಿಗೆ ಕೊರೋನಾ ವೈರಸ್ ಸೋಂಕು ಹರಡಿದ ಚೀನಾದಲ್ಲಿ ಈಗ ಮತ್ತೆ ಭಾರೀ ಪ್ರಮಾಣದಲ್ಲಿ ಕೋವಿಡ್-19ಸೋಂಕು ಪತ್ತೆಯಾಗಿದ್ದು ರಾಜಧಾನಿ ಬೀಜಿಂಗ್ ಸೇರಿದಂತೆ ಅನೇಕ ನಗರಗಳಲ್ಲಿ ಲಾಕ್ಡೌನ್ನಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.