ಭಾರತಕ್ಕೆ ಇನ್ನಷ್ಟು ತೊಂದರೆ ಒಡ್ಡಲು ಕಮ್ಯುನಿಸ್ಟ್ ರಾಷ್ಟ್ರ ಕುತಂತ್ರ ಭಯೋತ್ಪಾದನೆ ಸಾರಲು ಚೀನಾಗೆ ಪಾಕ್ ಸಾಧನ

ಬೀಜಿಂಗ್: ಕಳೆದ ಐದಾರು ತಿಂಗಳಿಂದ ಭಾರತದೊಂದಿಗೆ ಗಡಿ ಬಿಕ್ಕಟ್ಟು ಸೃಷ್ಟಿಸಿಕೊಂಡಿರುವ ಚೀನಾವು, ಭಾರತಕ್ಕೆ ಇನ್ನಷ್ಟು ತೊಂದರೆ ಒಡ್ಡಲು ಪಾಕಿಸ್ಥಾನವನ್ನು ಭಯೋತ್ಪಾದನಾ ಸಾಧನವಾಗಿ ಬಳಸಿಕೊಳ್ಳುತ್ತಿದೆ ಎಂದು ಅಮೆರಿಕ ಸಾರ್ವಜನಿಕ ನೀತಿ ಸಂಶೋಧಕ ಮೈಕಲ್ ರುಬಿನ್ ಬಹಿರಂಗಪಡಿಸಿದ್ದಾರೆ.
ಈ ಕುರಿತಾಗಿ ವಾಷಿಂಗ್ಟನ್ ಪ್ರತಿಕೆಯೊಂದರಲ್ಲಿ ರುಬಿನ್ ಲೇಖನ ಪ್ರಕಟವಾಗಿದ್ದು, ಭಯೋತ್ಪಾದನಾ ಚಟುವಟಿಕೆ ಹತ್ತಿಕ್ಕಲು ಚೀನಾ ಯಾವುದೇ ಬದ್ಧತೆ ಹೊಂದಿಲ್ಲ ಎಂದು ತಿಳಿಸಿದ್ದಾರೆ.
ಸದ್ಯ ಭಾರತ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‍ಎಸಿ) ಹಾಗೂ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಎರಡೂ ಕಡೆ ನೆರೆರಾಷ್ಟ್ರಗಳಿಂದ ತೊಂದರೆಗೀಡಾಗಿದೆ. ಅತ್ತ ಚೀನಾ ಲಡಾಖ್ ಎಲ್‍ಎಸಿ ಉದ್ದಕ್ಕೂ ಬಿಕ್ಕಟ್ಟು ಸೃಷ್ಟಿಸಿಕೊಂಡಿದ್ದರೆ, ಇತ್ತ ಪಾಕಿಸ್ಥಾನ ನಿರಂತರವಾಗಿ ಭಾರತದೆಡೆಗೆ ಅಪ್ರಚೋದಿತ ದಾಳಿ ನಡೆಸುತ್ತಿದೆ. ಅಲ್ಲದೇ ಉಗ್ರ ಚಟುವಟಿಕೆ ನಡೆಸಲು ಪಾಕಿಸ್ಥಾನ ನೂತನ ವಿಧಾನ ಕಂಡುಕೊಂಡಿದ್ದು, ಡ್ರೋನ್ ಮೂಲಕ ಭಾರತದೊಳಗೆ ಶಸ್ತ್ರಾಸ್ತ್ರ ಎಸೆಯುತ್ತಿದೆ.
ಇಂತಹ ಸಂದರ್ಭದಲ್ಲಿ ಪಾಕಿಸ್ಥಾನವನ್ನು ಭಯೋತ್ಪಾದನೆ ಸಾರುವ ಸಾಧನವಾಗಿ ಬಳಸಿಕೊಳ್ಳುವ ಮೂಲಕ ಭಾರತಕ್ಕೆ ಕಿರುಕುಳ ನೀಡಲು ಕಮ್ಯುನಿಸ್ಟ್ ರಾಷ್ಟ್ರ ಷಡ್ಯಂತ್ರ ರಚಿಸಿದೆ ಎಂದು ತಿಳಿಸಿದ್ದಾರೆ. ಜತೆಗೆ ಲಡಾಖ್‍ನಿಂದ ಭಾರತದ ಚಿತ್ತವನ್ನು ಕಾಶ್ಮೀರದೆಡೆಗೆ ಹೊರಳಿಸಲು ಚೀನಾ ಸಂಚು ರೂಪಿಸಿದೆ ಎಂದೂ ಹೇಳಿದ್ದಾರೆ.
ಚೀನಾ ಭಾರತವನ್ನು ಹಿಂದಿಕ್ಕುವ ಮೂಲಕ ತಾನೇ ಆರ್ಥಿಕವಾಗಿ ಅಗ್ರವಾಗಬೇಕೆಂಬ ಹಪಾಹಪಿಯಲ್ಲಿದೆ. ಇದಕ್ಕಾಗಿಯೇ ಉಗ್ರ ಪೊಷಣೆ ರಾಷ್ಟ್ರ ಪಾಕ್ ಸಹಾಯವೂ ಪಡೆಯುತ್ತಿದೆ. ಸದ್ಯ ಉಗ್ರ ಚಟುವಟಿಕೆಗೆ ಧನ ಸಹಾಯ ಮಾಡಿದ್ದಕ್ಕಾಗಿ ಪಾಕ್ ಬೂದು ಪಟ್ಟಿಯಲ್ಲಿದ್ದು, ಇದರಿಂದ ಹೊರಬರಲು ಪಾಕ್ ಕೂಡ ಚೀನಾ ಸಹಾಯವನ್ನೇ ಬಯಸಿದೆ ಎಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ