ಸ್ವಲ್ಪ ಯೋಚಿಸಿ; ಕೊರೋನಾ ಹೋಗಿಲ್ಲ, ಲಾಕ್ ಮಾತ್ರ ತೆರವು: ತಪ್ಪದಿರಿ ಎಚ್ಚರ!

ಹೊಸದಿಲ್ಲಿ: ಕೋವಿಡ್ ಎರಡನೇ ಅಲೆ ಇನ್ನೂ ಅಂತ್ಯಗೊಂಡಿಲ್ಲವಾದರೂ, ಜನಜೀವನ ನಡೆಯಬೇಕೆಂಬ ಏಕೈಕ ಕಾರಣಕ್ಕಾಗಿ ಸರಕಾರ ಲಾಕ್‍ಡೌನ್ ಸಡಿಲಗೊಳಿಸಿದೆ. ಆದರೆ ಪ್ರವಾಸಿ ತಾಣಗಳಲ್ಲಿ, ಪೇಟೆಗಳಲ್ಲಿ ಜನ ಮಾಸ್ಕ್ , ಸಾಮಾಜಿಕ ಅಂತರ, ಸ್ವಚ್ಛತೆಗೆ ಆದ್ಯತೆ ಇಲ್ಲದೆ ಜನಜಂಗುಳಿ ಸೇರುತ್ತಿರುವುದನ್ನು ಗಮನಿಸಿರುವ ಕೇಂದ್ರ ಸರಕಾರವು ಈ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದೆ. ಎರಡನೇ ಅಲೆಯ ಅನಾಹುತ, ದುರಂತಗಳು ಇನ್ನೂ ಕಣ್ಣೆದುರು ಇರುವಾಗಲೇ ಜನ ಈ ರೀತಿ ಮೈಮರೆಯುತ್ತಿರುವುದು ಸರಕಾರ ಮತ್ತು ತಜ್ಞರ ಕಳವಳಕ್ಕೆ ಕಾರಣವಾಗಿದೆ. ಸ್ವಲ್ಪ ಯೋಚಿಸಿ! ಕೋವಿಡ್ 19ರ ಎರಡನೇ ಅಲೆ ಇನ್ನೂ ಅಂತ್ಯಗೊಂಡಿಲ್ಲ. ಲಾಕ್‍ಡೌನ್ ಮಾತ್ರ ತೆರವುಗೊಂಡಿರುವುದು ಎಂದು ಜನತೆಯನ್ನು ಸರಕಾರ ಮತ್ತು ತಜ್ಞರು ಎಚ್ಚರಿಸಿದ್ದಾರೆ.

ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಈ ಕೆಲವು ದೃಶ್ಯ ದಾಖಲೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಇದನ್ನು ನೋಡಿದರೆ ತೀವ್ರ ಆತಂಕವುಂಟಾಗುತ್ತಿದೆ ಎನ್ನುತ್ತಾ , ಪ್ರವಾಸಿ ತಾಣದ ಜಲಪಾತವೊಂದರಲ್ಲಿ ಅರೆನಗ್ನರಾಗಿರುವ ಜನಜಂಗುಳಿ ಯಾವುದೇ ಸಾಮಾಜಿಕ ಅಂತರ, ಮಾಸ್ಕ್‍ನಂತಹ ಮುನ್ನೆಚ್ಚರಿಕೆಗಳಿಲ್ಲದೆ ವರ್ತಿಸುತ್ತಿರುವುದನ್ನು ತೋರಿಸಿದರು. ಇದು ಕೋವಿಡ್ -19ಕ್ಕೆ ನೀಡಲಾಗುತ್ತಿರುವ ಮುಕ್ತ ಆಹ್ವಾನದಂತೆ ತೋರುತ್ತಿದೆ ಎಂದು ಅವರು ಆತಂಕದಿಂದ ಹೇಳಿದರು.

ಸ್ವಲ್ಪ ಯೋಚಿಸಿನೋಡಿ ಎನ್ನುತ್ತಾ ಲಾವ್ ಅಗರ್ವಾಲ್ ಅವರು ಜಲಪಾತದಲ್ಲಿ ಸೇರಿದ್ದ ಜನರು ಮೈಮರೆತಿರುವುದನ್ನುತೋರಿಸಿದರು. ಇದು ಖಂಡಿತಾ ಕೋವಿಡ್ 19 ಸೋಂಕಿಗೆ ನೀಡಲಾಗುತ್ತಿರುವ ಆಹ್ವಾನ. ಇಂತಹ ವರ್ತನೆ ಸಮುದಾಯಮಟ್ಟದಲ್ಲಿ ಹರಡಲು ಕಾರಣವಾಗಲಿದೆ ಎಂದು ಅವರು ಎಚ್ಚರಿಸಿದರು. ಇತ್ತೀಚೆಗೆ ಮುಸ್ಸೋರಿಯ ಕೆಂಪ್ಟಿ ಫಾಲ್ಸ್‍ನಲ್ಲಿ ಪ್ರವಾಸಿಗರು ಮೈಮರೆತು ವರ್ತಿಸಿದ್ದ ಚಿತ್ರಗಳು ವೈರಲ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು. ಇದೀಗ ಅಲ್ಲಿ ಕೇವಲ 30 ನಿಮಿಷಗಳ ಕಾಲ ಮಾತ್ರವೇ ಸ್ನಾನಕ್ಕೆ ಅವಕಾಶ ನೀಡಲಾಗುತ್ತಿದೆ.

ಕೊರೋನಾದ ಮೂರನೇ ಅಲೆ ಬಗ್ಗೆ ಸರಕಾರ ಮತ್ತು ತಜ್ಞರು ಜನರಿಗೆ ಸತತವಾಗಿ ಎಚ್ಚರಿಕೆ ನೀಡುತ್ತಲೇ ಇದ್ದರೂ ಜನರ ಈ ರೀತಿಯ ಹೊಣೆಗೇಡಿ ವರ್ತನೆ ಆಘಾತ ಮೂಡಿಸುತ್ತಿದೆ. ಪ್ರವಾಸಿ ತಾಣಗಳಲ್ಲಿ ಸಾಲುದ್ದದ ಖಾಸಗಿ ವಾಹನಗಳ ಸರತಿಗಳು ಗಂಭೀರ ಎಚ್ಚರಿಕೆಯ ಕರೆಗಂಟೆಯನ್ನು ಒತ್ತುತ್ತಿವೆ. ನಾವಿನ್ನೂ ಎರಡನೇ ಅಲೆಯನ್ನು ನಿಭಾಯಿಸಲು ಹೆಣಗಾಡುತ್ತಿದ್ದೇವೆ. ಆದರೆ ಲಾಕ್‍ಡೌನ್ ಸಡಿಲಗೊಳಿಸಿದ ಮಾತ್ರಕ್ಕೆ ಕೊರೋನಾ ತೊಲಗಿದೆ ಎಂದು ಜನ ತಪ್ಪು ಭಾವಿಸಿ ಈ ರೀತಿ ವರ್ತಿಸುತ್ತಿರುವುದು ಸಲ್ಲದು ಎಂದು ಅವರು ಆಗ್ರಹಿಸಿದರು.

ಹಾಗೆಯೇ ಇತ್ತೀಚೆಗೆ ಧರ್ಮಶಾಲಾದಲ್ಲಿ ಪುಟ್ಟ ಬಾಲಕನೊಬ್ಬ ಜನದಟ್ಟಣೆಯ ನಗರಬೀದಿಯೊಂದರಲ್ಲಿ ಸಾಗುತ್ತಿರುವ ದೃಶ್ಯವೂ ವೈರಲ್ ಆಗಿತ್ತು. ಅಲ್ಲಿ ಜನರು ಯಾವುದೇ ಮಾಸ್ಕ್, ಅಂತರವಿಲ್ಲದೆ ಸಾಗುತ್ತಿದ್ದುದು ಪ್ರಜ್ಞಾವಂತರನ್ನು ವ್ಯಾಪಕ ಕಳವಳಕ್ಕೀಡು ಮಾಡಿತ್ತು.

ಈಗಾಗಲೇ ಅನೇಕ ಪ್ರಮುಖ ದೇಶಗಳಲ್ಲಿ ಕೊರೋನಾ ಸೋಂಕು ಭಾರೀ ಪ್ರಮಾಣದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಲಾಕ್‍ಡೌನ್‍ಗೆ ಮೊರೆ ಹೋಗಿರುವ ವರದಿಗಳು ಬರುತ್ತಿವೆ. ರಶ್ಯಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಸೇರಿದಂತೆ ಅನೇಕ ದೇಶಗಳು ತಮ್ಮ ದೇಶದ ಜನತೆಗೆ ಅಪಾಯದ ಎಚ್ಚರಿಕೆ ನೀಡಿ , ಯಾವುದೇ ಕಾರಣಕ್ಕೂ ಮಾಸ್ಕ್ , ಅಂತರ ಕಾಯ್ದುಕೊಳ್ಳುವಿಕೆ, ಕೈತೊಳೆದುಕೊಳ್ಳುವಿಕೆಯಂತಹ ಕೊರೋನಾ ತಡೆ ನಿಯಮಗಳನ್ನು ಮರೆಯಬಾರದೆಂದು ಆಗ್ರಹಿಸಿವೆ.

ದೇಶದ ಶೇ.50 ಕೇಸುಗಳು ಮಹಾರಾಷ್ಟ್ರ,ಕೇರಳದಲ್ಲೇ!
ಇದೀಗ ದೇಶದಲ್ಲಿ ವರದಿಯಾಗುತ್ತಿರುವ ಒಟ್ಟು ಕೊರೋನಾ ಪ್ರಕರಣಗಳಲ್ಲಿ ಶೇ.50ರಷ್ಟು ಭಾಗ ಮಹಾರಾಷ್ಟ್ರ (ಶೇ.21)ಮತ್ತು ಕೇರಳ(ಶೇ.32)ದಿಂದಲೇ ವರದಿಯಾಗುತ್ತಿವೆ. ಶೇ.80ರಷ್ಟು ಹೊಸ ಕೋವಿಡ್ ಪ್ರಕರಣಗಳು 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 90 ಜಿಲ್ಲೆಗಳಿಂದ ವರದಿಯಾಗುತ್ತಿವೆ.

ಜು.8ಕ್ಕೆ ಕೊನೆಗೊಂಡ ವಾರಕ್ಕೆ 17ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 66ಜಿಲ್ಲೆಗಳಲ್ಲಿ ಶೇ.10ಕ್ಕಿಂತಲೂ ಹೆಚ್ಚು ಪಾಸಿಟಿವಿಟಿ ದರ ಇರುವುದನ್ನು ಕೇಂದ್ರ ಸರಕಾರ ಬೊಟ್ಟು ಮಾಡಿ ಎಚ್ಚರಿಕೆ ನೀಡಿದೆ.

ನಿನ್ನೆ 43,393 ಜನಕ್ಕೆ ಸೋಂಕು : ದೇಶದಲ್ಲಿ ಶುಕ್ರವಾರ 43,393 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಪ್ರಮಾಣ 4,58,727ಕ್ಕೆ ಇಳಿದಿವೆ . ಆದರೆ 911ಮಂದಿ ಬಲಿಯಾಗಿದ್ದಾರೆ ಎಂದು ಕೇಂದ್ರದ ವರದಿ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ