ಹೊಸದಿಲ್ಲಿ: ಸಂಬಂಧಪಟ್ಟ ಆಡಳಿತದ ಅನುಮೋದನೆ ದೊರೆತಲ್ಲಿ 2021ರ ಎರಡನೇ ತ್ರೈಮಾಸಿಕದಲ್ಲಿ ಕೋವ್ಯಾಕ್ಸಿನ್ ಲಸಿಕೆ ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಭಾರತ್ ಬಯೋಟೆಕ್ನ ಅಂತಾರಾಷ್ಟ್ರೀಯ ಕಾರ್ಯನಿರ್ವಾಹಕ ನಿರ್ದೇಶಕ ಸಾಯಿ ಪ್ರಸಾದ್ ಭಾನುವಾರ ತಿಳಿಸಿಧಾರೆ.
ಮೂರನೇ ಹಂತದ ಪ್ರಯೋಗವನ್ನು ದೇಶಾದ್ಯಂತ ಯಶಸ್ವಿಯಾಗಿ ಪೂರೈಸುವುದು ಕಂಪನಿಯ ತಕ್ಷಣದ ಆದ್ಯತೆಯಾಗಿದೆ ಎಂದೂ ಅವರು ಹೇಳಿಧಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) – ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದೊಂದಿಗೆ ಕೋವ್ಯಾಕ್ಸಿನ್ ಅಭಿವೃದ್ಧಿಪಡಿಸಲಾಗಿದೆ.
ಕೊನೆಯ ಹಂತದ ಪ್ರಯೋಗದ ಬಳಿಕ ಲಸಿಕೆಯ ಸುರಕ್ಷತೆ, ದಕ್ಷತೆ ದತ್ತಾಂಶಗಳ ಆಧಾರದಲ್ಲಿ ಎಲ್ಲ ರೀತಿಯ ಅನುಮೋದನೆಗಳು ದೊರೆತರೆ 2021ರ ಎರಡನೇ ತ್ರೈಮಾಸಿಕದಲ್ಲಿ ಲಸಿಕೆ ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ ಎಂದು ಸಾಯಿ ಪ್ರಸಾದ್ ತಿಳಿಸಿಧಾರೆ.
ಕೋವ್ಯಾಕ್ಸಿನ್ ಮೂರನೇ ಹಂತದ ಪ್ರಯೋಗಕ್ಕೆ ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ) ಇತ್ತೀಚೆಗೆ ಅನುಮತಿ ನೀಡಿದೆ. ಜತೆಗೆ, ಲಸಿಕೆಯ ಎರಡನೇ ಹಂತದ ಪ್ರಯೋಗದ ದತ್ತಾಂಶ ಹಾಗೂ ಕೆಲವು ಸ್ಪಷ್ಟನೆಗಳನ್ನು ನೀಡಬೇಕು ಎಂದು ಸೂಚಿಸಿತ್ತು.