ಮಂದಿರಕ್ಕೆ ಸ್ಯಾಂಡ್‍ಸ್ಟೋನ್: ಗಣಿಗಾರಿಕೆ ನಡೆಸಲು ರಾಜಸ್ಥಾನ ಕೇಂದ್ರಕ್ಕೆ ಮನವಿ

ಹೊಸದಿಲ್ಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ರಾಜಸ್ಥಾನದ ವಿಶೇಷ ಸ್ಯಾಂಡ್‍ಸ್ಟೋನ್ (ಗುಲಾಬಿ ಬಣ್ಣದ ವಿಶೇಷ ಕಲ್ಲು)ಗಳ ಅವಶ್ಯವಿದ್ದು, ಈ ಕಲ್ಲಿನ ಗಣಿಗಾರಿಕೆಗಾಗಿ ಕೇಂದ್ರ ಸರ್ಕಾರದ ಅನುಮತಿ ಕೋರಲು ರಾಜಸ್ಥಾನ ಸರ್ಕಾರ ತೀರ್ಮಾನಿಸಿದೆ.
ರಾಜಸ್ಥಾನದ ಭಾರತ್ಪುರದಲ್ಲಿರುವ ಬ್ಯಾಂಡ್ ಬರೇಥಾ ವನ್ಯಜೀವಿ ಅಭಯಾರಣ್ಯದಲ್ಲಿರುವ ಬಾನ್ಸಿ ಪಹಾರ್‍ಪುರ ಬ್ಲಾಕ್‍ನಲ್ಲಿ ಈ ವಿಶೇಷ ಸ್ಯಾಂಡ್‍ಸ್ಟೋನ್ ದೊರೆಯಲಿದ್ದು, ಇದಕ್ಕಾಗಿ ಅರಣ್ಯ ಮತ್ತು ವನ್ಯಜೀವಿ ಕಾಯ್ದೆ ಅನ್ವಯ ಕೇಂದ್ರ ಸರ್ಕಾರದ ಅನುಮತಿ ಬೇಕಾಗಿದೆ. ಹಾಗಾಗಿ ರಾಜಸ್ಥಾನ ಸರ್ಕಾರವು ಕೇಂದ್ರದ ಅನುಮತಿ ಪಡೆಯಲು ಹೆಚ್ಚಿನ ಆದ್ಯತೆ ಮೇರೆಗೆ ಮನವಿ ಮಾಡಲಿದೆ ಎಂದು ತಿಳಿದುಬಂದಿದೆ.
ಬಾನ್ಸಿ ಪಹಾರ್‍ಪುರದ ಒಂದು ಲಕ್ಷ ಕ್ಯೂಬಿಕ್ ಅಡಿ ವ್ಯಾಪ್ತಿಯಲ್ಲಿ ಈ ವಿಶೇಷ ಗಲಾಬಿ ಬಣ್ಣದ ಕಲ್ಲುಗಳು ಸಿಗುತ್ತವೆ. 1989ರಲ್ಲಿ ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಸಿದ ಬಳಿಕ ಅಯೋಧ್ಯೆಯಲ್ಲಿ ಈ ಕಲ್ಲುಗಳನ್ನು ಸಂಗ್ರಹಿಸಲಾಗುತ್ತಿದೆ. ಅದರಲ್ಲೂ ಈಗ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲಾಗಿರುವ ಹಿನ್ನೆಲೆಯಲ್ಲಿ ಸ್ಯಾಂಡ್‍ಸ್ಟೋನ್‍ಗಳ ಅವಶ್ಯಕತೆ ಜಾಸ್ತಿ ಇದೆ.
ಈ ಹಿಂದೆಯೂ ವಿಶೇಷ ಕಲ್ಲುಗಳ ಸಾಗಣೆಗೆ ಮಧ್ಯಪ್ರದೇಶ ಸರ್ಕಾರ ಅಡ್ಡಿಯಾದ ಹಿನ್ನೆಲೆಯಲ್ಲಿ, ರಾಮಮಂದಿರ ದೇಶದ ಜನರ ಭಾವನಾತ್ಮಕ ವಿಷಯವಾಗಿದೆ ಎಂಬುದನ್ನು ಮಧ್ಯಪ್ರದೇಶ ಸರ್ಕಾರ ಅರ್ಥಮಾಡಿಕೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಒತ್ತಾಯಿಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ