ಚಿತ್ರದುರ್ಗ: ಏ-೨೯: ಕರ್ನಾಟಕದಲ್ಲಿ ಬಿಜೆಪಿಯ ಸುನಾಮಿ ಎದ್ದಿದ್ದು, ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಸರ್ಕಾರ ರಚನೆ ಖಚಿತ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗದ ಹಿರಿಯೂರಿನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅಮಿತ್ ಷಾ, ಮಿತ್ರರೇ ನಾನು ಮೂರು ಬಾರಿ ಚಿತ್ರದುರ್ಗಕ್ಕೆ ಆಗಮಿಸಿದಾಗಲೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬಿಜೆಪಿ ಗೆಲ್ಲುವ ಭರವಸೆ ಮೂಡಿಸಿದ್ದೀರಿ, ನಾನು ಈ ಬಾರಿ ರಾಜ್ಯದಾದ್ಯಂತ ಭೇಟಿ ನೀಡಿ ಗಮನಿಸಿದಾಗ ಕರ್ನಾಟಕದಲ್ಲಿ ಬಿಜೆಪಿಯ ಸುನಾಮಿ ಎದ್ದಿರುವುದು ಕಂಡುಬಂದಿದೆ ಎಂದರು.
ನಾನು ಸಿದ್ದರಾಮಯ್ಯ ಅವರಬಳಿ ಕೇಳಲು ಬಯಸುತ್ತೇನೆ, ನೀವು ಟಿಪ್ಪು ಜಯಂತಿ ಮಾಡುವ ಮೂಲಕ ಕರ್ನಾಟಕಕ್ಕೆ ಅಪಮಾನ ಮಾಡಿದ್ದೀರಿ,ನಿಮಗೆ ಚಿತ್ರದುರ್ಗದ ಮಹಾನಾಯಕ ಮದಕರಿ ನಾಯಕ, ಸರ್ ಎಂ ವಿಶ್ವೇಶ್ವರಯ್ಯ ರಂತಹ ನಾಯಕರು ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದರು.
ರಾಹುಲ್ ಬಾಬಾ ಕರ್ನಾಟಕದಲ್ಲಿ ಪ್ರವಾಸ ಮಾಡ್ತಿದಾರೆ, ಅವರು ಹೇಳ್ತಾರೆ ಮತ್ತೊಮ್ಮೆ ಸಿದ್ದರಾಮಯ್ಯ ಸರ್ಕಾರ ಬರುತ್ತೆ ಅಂತ,ಆದರೆ ಸಿದ್ದರಾಮಯ್ಯ ಅವರೇ ಸೋಲುವ ಬೀತಿಯಿಂದ ಬಾದಾಮಿಗೆ ಪಲಾಯನ ಮಾಡಿದ್ದಾರೆ, ಆದರೆ ಎರಡೂ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಸಿದ್ದರಾಮಯ್ಯ ಅವರನ್ನ ಸೋಲಿಸುತ್ತಾರೆ, ಸಕ್ಕರೆ ಕಾರ್ಖಾನೆಗಳಿಗೆ ಬೀಗ ಹಾಕಿದ್ದಾರೆ,ನಾವು ವಿವಿ ಸಾಗರದಿಂದ ಈ ಭಾಗದ ರೈತರಿಗೆ ಐದು ಟಿಎಂಸಿ ನೀರು ಕೊಡುವ ಮೂಲಕ ಮತ್ತೆ ಸಕ್ಕರೆ ಕಾರ್ಖಾನೆ ತೆರೆಯುತ್ತೇವೆ ಎಂದು ತಿಳಿಸಿದರು.
ನಾನು ರಾಹುಲ್ ಬಾಬನಿಗೆ ಲೆಕ್ಕ ಕೊಡುವುದಿಲ್ಲ, ಕರ್ನಾಟಕದ ಜನ ಕೇಳಿದರೆ ಲೆಕ್ಕ ಕೊಡುತ್ತೇನೆ, ಮೋದಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಕರ್ನಾಟಕಕ್ಕೆ 14ನೇ ಹಣಕಾಸು ಯೋಜನೆಯಲ್ಲಿ 2ಲಕ್ಷದ 19ಸಾವಿರ ಕೋಟಿ ಹಣ ಕೊಟ್ಟಿದೆ,ಆದರೆ ಆ ಹಣ ನಿಮಗೆ ತಲುಪಿದೆಯಾ? ಆ ಹಣವನ್ನು ಸಿದ್ದರಾಮಯ್ಯ ಅವರ ಭ್ರಷ್ಟ ಸರ್ಕಾರ ನುಂಗಿ ನೀರು ಕುಡಿದಿದೆ,
ಸಿದ್ದರಾಮಯ್ಯ ಅವರ ಭ್ರಷ್ಟಾಚಾರದ ಪಟ್ಟಿ ಬಹು ದೊಡ್ಡದಾಗಿದೆ,ನಿಮಗೆ ನಲ್ವತ್ತು ಲಕ್ಷದ ವಾಚು ಕೊಟ್ಟವರು ಯಾರು? ಕರ್ನಾಟಕದ ಜನರಲ್ಲಿ ಮನವಿ ಮಾಡ್ತೇನೆ, ಮತ್ತೊಮ್ಮೆ ಯಡಿಯೂರಪ್ಪ ಅವರನ್ನ ಮುಖ್ಯಮಂತ್ರಿ ಮಾಡಿ, ಅವರು ರಾಜ್ಯವನ್ನ ಅಭಿವೃದ್ಧಿ ಪತದತ್ತ ಕೊಂಡೊಯ್ಯುತ್ತಾರೆ ಎಂದರು.
ನಿಮಗೆ ಕಮಿಷನ್ ಸರ್ಕಾರ ಬೇಕಾ? ಕಮಿಟೆಡ್ ಸರ್ಕಾರ ಬೇಕಾ?ಸಿದ್ದರಾಮಯ್ಯ ಬೇಕಾ? ಯಡಿಯೂರಪ್ಪ ಬೇಕಾ? ನೀವೇ ಹೇಳಿ..12ನೇ ತಾರಿಖು ನಡೆಯುವ ಚುನಾವಣೆಯಲ್ಲಿ ಕಮಲಕ್ಕೆ ಮತನೀಡುವ ಮೂಲಕ ಬಿಜೆಪಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
karnataka assembly election,chitradurga,amith shah