ಆಪರೇಷನ್ ಕಮಲದಿಂದ ತಪ್ಪಿಸಿಕೊಳ್ಳಲು ಹೈದರಾಬಾದ್ ಹಾಗೂ ಕೊಚ್ಚಿಗೆ ಶಿಫ್ಟ್ ಆದ ಕಾಂಗ್ರೆಸ್-ಜೆಡಿಎಸ್ ಶಾಸಕರು

ಬೆಂಗಳೂರು:ಮೇ-18: ಬಿಜೆಪಿಯ ಆಪರೇಷನ್ ಕಮಲದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬೆಂಗಳೂರಿನಿಂದ ಹೈದರಾಬಾದ್’ಗೆ ಹಾಗೂ ಕೊಚ್ಚಿಗೆ ಸ್ಥಳಾಂತರಗೊಂಡಿದ್ದಾರೆ.

ಬಿಡದಿ ಬಳಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದ ಕಾಂಗ್ರೆಸ್ ಶಾಸಕರು ಹಾಗೂ ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ ನಲ್ಲಿ ಉಳಿದುಕೊಂಡಿದ್ದ ಜೆಡಿಎಸ್ ಶಾಸಕರು ಕೊಚ್ಚಿ ಹಾಗೂ ಹೈದರಾಬಾದ್ ರೆಸಾರ್ಟ್ ಸೇರಿ ವಿವಿಧ ಹೋಟೆಲ್’ಗಳಲ್ಲಿ ವಾಸ್ತವ್ಯ ಹೂಡಲು ಮುಂದಾಗಿದ್ದಾರೆ.

ಕಾಂಗ್ರೆಸ್ ಶಾಸಕರು ಗುರುವಾರ ತಡರಾತ್ರಿ 12 ಹಾಗೂ 3 ಗಂಟೆಗೆ ಬೆಂಗಳೂರಿನಿಂದ 2 ವಿಮಾನಗಳಲ್ಲಿ ಕೊಚ್ಚಿಗೆ ತೆರಳಿದ್ದಾರೆ. ಜೆಡಿಎಸ್ ಶಾಸಕರು ಶುಕ್ರವಾರ ಪ್ರಯಾಣ ಬೆಳೆಸಲಿದ್ದಾರೆ, ಕಾಂಗ್ರೆಸ್ ಶಾಸಕರನ್ನು ಕೊಚ್ಚಿಗೆ ಸ್ಥಳಾಂತರಿಸಲು ವಿಶೇಷ ವಿಮಾನ ವ್ಯವಸ್ಥೆಯಾಗದ್ದರಿಂದಾಗಿ ನಾಗರೀಕ ವಿಮಾನದಲ್ಲಿಯೇ ತೆರಳಿದ್ದಾರೆಂದು ವರದಿಗಳು ತಿಳಿಸಿವೆ.

ವಿಶೇಷ ವಿಮಾನಕ್ಕೆ ಕೇಂದ್ರ ಸರ್ಕಾರದ ಅಧೀನದ ನಾಗರೀಕ ವಿಮಾನಯಾನ ಸಚಿವಾಲಯ ನಿರಾಕರಿಸಿದೆ ಎಂದು ಹೇಳಲಾಗುತ್ತಿದ್ದು, ಇದು ಕಾಂಗ್ರೆಸ್ಸಿಗರ ಕಣ್ಣು ಕೆಂಪಗಾಗುವಂತೆ ಮಾಡಿದೆ.

ಈ ನಡುವೆ ಈಗಲ್ ಟನ್ ರೆಸಾರ್ಟ್ ಗೆ ನೀಡಲಾಗಿದ್ದ ಪೊಲೀಸ್ ಭದ್ರತೆಯನ್ನೂ ಗುರುವಾರ ಮಧ್ಯಾಹ್ನ 4.30ರ ವೇಳೆಗೆ ಹಿಂದಕ್ಕೆ ಪಡೆಯಲಾಗಿದೆ.

ರೆಸಾರ್ಟ್ ಬಳಿ ಒಂದು ಡಿಎಆರ್ ತುಕಡಿ ಹಾಗೂ ಇಪ್ಪತ್ತಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಮುಖ್ಯಮಂತ್ರಿ ಕಾರ್ಯಾಲಯದ ಸೂಚನೆ ಮೇರೆಗೆ ಭದ್ರತೆಯನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

Karnataka assembly election, Operation lotus, Congress, JDS, MLA shifted Hyderabad, Kochi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ