ದೇಶಕ್ಕೆ ಪಾರದರ್ಶಕ, ಬಲಿಷ್ಠ ಸರ್ಕಾರವನ್ನು ನೀಡಲು ಮತ್ತೆ ಬಿಜೆಪಿ ಅಧಿಕಾರಕ್ಕೆ ತನ್ನಿ: ಅಮಿತ್ ಶಾ ಮನವಿ

ನವದೆಹಲಿ: ದೇಶಕ್ಕೆ ಪಾರದರ್ಶಕ, ಬಲಿಷ್ಠ ಮತ್ತು ನಿರ್ಧರಿತ ಸರ್ಕಾರವನ್ನು ಬಿಜೆಪಿ ನೀಡಲಿದ್ದು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮ್ಮಿತ್ ಶಾ ಮತದಾರರಲ್ಲಿ ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ ಬಿಜೆಪಿ ಚುನಾವಣಾ ಪ್ರಣಾಳಿಕೆ ಸಂಕಲ್ಪ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತದ ಇತಿಹಾಸದಲ್ಲಿ 2014ರಿಂದ 2019ರವರೆಗೆ ಸುವರ್ಣಾಕ್ಷರಗಳಲ್ಲಿ ಬರೆದಿಡುವ ವರ್ಷವಾಗಿತ್ತು ಎಂದರು.

ನಮ್ಮ ಪಕ್ಷದ ಸಂಕಲ್ಪ ಪತ್ರದಲ್ಲಿ ನೀಡಿದ ಭರವಸೆಗಳನ್ನು ನಾವು ಈಡೇರಿಸುತ್ತೇವೆ. ಭಾರತಕ್ಕೆ ಪಾರದರ್ಶಕ, ಬಲಿಷ್ಠ ಸರ್ಕಾರವನ್ನು ಬಿಜೆಪಿ ನೀಡಲಿದ್ದು ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದರು.

ಕಳೆದ 5 ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ವಿಶ್ವದಲ್ಲಿಯೇ ಸೂಪರ್ ಪವರ್ ಆಗಿ ಹೊರಹೊಮ್ಮಿದೆ. ಈಗ ನಮ್ಮ ದೇಶದಬಗ್ಗೆ ಎಲ್ಲರೂ ಹೆಮ್ಮೆಯಿಂದ ಮಾತನಾಡುತ್ತಾರೆ. ದೇಶಕ್ಕೆ ಸುಭದ್ರ, ನಿರ್ಧರಿತ ಸರ್ಕಾರವನ್ನು ನೀಡುವತ್ತ ಕಳೆದ 5 ವರ್ಷಗಳಲ್ಲಿ ಬಿಜೆಪಿ ಕೆಲಸ ಮಾಡಿದೆ. ದೇಶದ ಆಶಾಭಾವನೆ ಇಂದು ನಿರೀಕ್ಷೆಯಾಗಿ ಬದಲಾಗಿದೆ. ಉಗ್ರರನ್ನು ದೇಶದಿಂದ ನಿರ್ನಾಮ ಮಾಡಲು ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ನಂತಹ ಮಹತ್ವದ ನಿರ್ಧಾರಗಳನ್ನು ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿದ್ದಾರೆ. ಈ ಮೂಲಕ ಭಾರತವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ವಿಶ್ವಕ್ಕೆ ಮೋದಿಯವರು ಸಂದೇಶ ಸಾರಿದ್ದಾರೆ ಎಂದರು.

2014ರಲ್ಲಿ ಭಾರತದ ಆರ್ಥಿಕತೆ 11ನೇ ಸ್ಥಾನದಲ್ಲಿತ್ತು. ಇಂದು ವಿಶ್ವದಲ್ಲಿ ಭಾರತದ ಆರ್ಥಿಕತೆ 6ನೇ ಸ್ಥಾನದಲ್ಲಿದೆ, ಮುಂದಿನ ದಿನಗಳಲ್ಲಿ ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಆರ್ಥಿಕ ದೇಶವಾಗಿ ಹೊರಹೊಮ್ಮಲಿದೆ ಎಂದರು.

Lok Sabha elections 2019,BJP,Manifesto,amith shah

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ