ಹೊಸದಿಲ್ಲಿ:ದೇಶದಲ್ಲಿ ಹಕ್ಕಿಜ್ವರ ವ್ಯಾಪಿಸುತ್ತಿರುವುದನ್ನು ತಡೆಗಟ್ಟಲು ಸರ್ಕಾರ ಎಲ್ಲ ಕ್ರಮ ಕೈಗೊಂಡಿರುವ ನಡುವೆಯೇ,ದಿಲ್ಲಿ ,ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಹರಡಿರುವುದು ದೃಢಪಟ್ಟಿದ್ದು,ರೋಗ ಹರಡಿರುವ ರಾಜ್ಯಗಳ ಸಂಖ್ಯೆ9ಕ್ಕೆ ಏರಿಕೆಯಾಗಿದೆ.
ಭೋಪಾಲ್ ಮೂಲದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯೂರಿಟಿ ಅನಿಮಲ್ ಡಿಸೀಸ್ ಸಂಸ್ಥೆಗೆ ಕಳುಹಿಸಲಾಗಿದ್ದ ದಿಲ್ಲಿ ಹಾಗೂ ಮಹಾರಾಷ್ಟ್ರ ಮೂಲದ ಸತ್ತಹಕ್ಕಿಗಳ ಮಾದರಿಪರೀಕ್ಷೆಯಲ್ಲಿ ರೋಗ ಹರಡಿರುವುದು ದೃಢಪಟ್ಟಿದೆ. ಈ ಬೆನ್ನಲ್ಲೆ, ಉತ್ತರಾಖಂಡದಲ್ಲೂ 200ಕ್ಕೂ ಅಕ ಪಕ್ಷಿಗಳು ಮೃತಪಟ್ಟಿದ್ದು, ವರದಿ ಬಳಿಕ ರೋಗ ಹರಡಿದೆಯೇ ಇಲ್ಲವೇ ಎಂಬುದು ತಿಳಿದುಬರಲಿದೆ.
ಇನ್ನು ದಿಲ್ಲಿ ಅಭಿವೃದ್ಧಿ ಪ್ರಾಕಾರದ 15ಕ್ಕೂ ಅಕ ಉದ್ಯಾನವನಗಳಲ್ಲಿ 91 ಕಾಗೆಗಳು ಹಾಗೂ 27 ಬಾತುಕೋಳಿಗಳು ಸತ್ತುಬಿದ್ದಿರುವುದು ಪತ್ತೆಯಾಗಿದ್ದು, ತ್ರಿಲೋಕಪುರಿಯಲ್ಲಿರುವ ಸಂಜಯ್ಸರೋವರ, ಸುತ್ತಮುತ್ತಲಿನ ಪ್ರದೇಶಗಳನ್ನು ಅಲರ್ಟ್ಜೋನ್ ಎಂದು ಘೋಷಿಸಲಾಗಿದೆ.
ಇನ್ನು ಮಹಾರಾಷ್ಟ್ರದ ಪರಭಾನಿ ಜಿಲ್ಲೆಯ ಮುರುಂಬಾ ಗ್ರಾಮದಲ್ಲಿ 800ಕ್ಕೂ ಅಕ ಕೋಳಿಗಳು ಹಕ್ಕಿಜ್ವರದಿಂದ ಮೃತವಾಗಿದ್ದು,ರಾಜ್ಯದಲ್ಲೂ ರೋಗ ಹರಡಿರುವುದು ದೃಢಪಟ್ಟಿದೆ. ಪಕ್ಷಿಗಳು ಸತ್ತಿರುವ 10 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧ ಹೇರಲಾಗಿದೆ ಯಾದರೂ,ರಾಜ್ಯದಲ್ಲಿ ಇನ್ನೂ 8 ಸಾವಿರ ಪಕ್ಷಿಗಳು ಸಾವಿಗೀಡಾಗಬಹುದಾದ ಸಾಧ್ಯತೆ ಇದ್ದು, ಇದನ್ನು ತಡೆಗಟ್ಟಲು ಅಗತ್ಯಕ್ರಮ ಕೈಗೊಳ್ಳಲಾಗಿದೆ ಎಂದು ಅಕಾರಿಗಳು ಹೇಳಿದ್ದಾರೆ.
ಈಗಾಗಲೇ ರಾಜಸ್ಥಾನ, ಕೇರಳ, ಮಧ್ಯಪ್ರದೇಶ,ಹಿಮಾಚಲ ಪ್ರದೇಶ, ಹರ್ಯಾಣ, ಗುಜರಾತ್, ಉತ್ತರ ಪ್ರದೇಶದಲ್ಲಿದಲ್ಲೂ ರೋಗ ದೃಢಪಟ್ಟಿದ್ದು, ಇತರೆ ರಾಜ್ಯಗಳಿಗೆ ಹರಡದಂತೆ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಕೇಳಿದೆ.