ಶತಮಾನದ ಹಳೆಯ ಕೆಲ ಕಾನೂನುಗಳು ಈಗ ಹೊರೆ: ಪ್ರಧಾನಿ ಮೋದಿ ದೇಶದ ಅಭಿವೃದ್ಧಿಗೆ ಸುಧಾರಣೆಗಳು ಅತ್ಯಗತ್ಯ

ಹೊಸದಿಲ್ಲಿ: ಶತಮಾನದ ಹಿಂದಿನ ಕೆಲ ಕಾನೂನುಗಳು ಈಗ ಹೊರೆಯಾಗಿ ಪರಿಣಮಿಸಿದ್ದು, ಈ ಹಿನ್ನೆಲೆಯಲ್ಲಿ ದೇಶದ ಅಭಿವೃದ್ಧಿಗಾಗಿ ಸುಧಾರಣೆಗಳು ಅತ್ಯಗತ್ಯವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸ್ಪಷ್ಟವಾಗಿ ವಿವರಿಸಿದ್ದಾರೆ.
ಆಗ್ರಾ ಮೆಟ್ರೋ ರೈಲು ಯೋಜನೆಗೆ ವಿಡಿಯೋ ಕಾನರೆನ್ಸ್ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಮೂರು ಹೊಸ ಕೃಷಿ ಕಾನೂನುಗಳನ್ನು ವಿರೋಸಿ ಮಂಗಳವಾರ ಭಾರತ್ ಬಂದ್‍ಗೆ ಕರೆ ನೀಡಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಸುಧಾರಣೆಗಳ ಮಹತ್ವದ ಬಗ್ಗೆ ತಿಳಿಸಿದ್ದಾರೆ. ಆದರೆ, ನೇರವಾಗಿ ಹೊಸ ಕಾನೂನುಗಳ ಬಗೆಗಾಗಲಿ ಅಥವಾ ರೈತರ ಪ್ರತಿಭಟನೆ ಕುರಿತಾಗಲಿ ಉಲ್ಲೇಖಿಸಲಿಲ್ಲ.
ಅಭಿವೃದ್ಧಿಗಾಗಿ ಸುಧಾರಣೆಗಳು ಅಗತ್ಯ. ಹೊಸ ವ್ಯವಸ್ಥೆ ಮತ್ತು ಹೊಸ ಸೌಲಭ್ಯಗಳಿಗಾಗಿ ಸುಧಾರಣೆಗಳು ಅತ್ಯಗತ್ಯ. ಹಳೆಯ ಶತಮಾನದ ಕಾನೂನುಗಳೊಂದಿಗೆ ನಾವು ಮುಂದಿನ ಶತಮಾನವನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ಮೋದಿ ಒತ್ತಿ ಹೇಳಿದ್ದಾರೆ.
ಕೆಲ ಕಾನೂನುಗಳು ಹಿಂದಿನ ಶತಮಾನದಲ್ಲಿ ಉತ್ತಮವಾಗಿದ್ದವು, ಆದರೆ ಪ್ರಸಕ್ತ ಶತಮಾನದಲ್ಲಿ ಅವು ಹೊರೆಯಾಗಿ ಪರಿಣಮಿಸಿವೆ. ಸುಧಾರಣೆಗಳು ನಿರಂತರ ಪ್ರಕ್ರಿಯೆಯಾಗಿರಬೇಕು ಎಂದು ಪ್ರಧಾನಿ ತಿಳಿಸಿದ್ದಾರೆ.
ತಮ್ಮ ನೇತೃತ್ವದ ಸರ್ಕಾರವು ಸಮಗ್ರ ಸುಧಾರಣೆಗಳನ್ನು ಜಾರಿಗೆ ತರುತ್ತಿದೆ. ಈ ಹಿಂದೆ ಸುಧಾರಣೆಗಳು ತುಣುಕುಗಳ ರೀತಿಯಲ್ಲಿ ಬಳಕೆಯಾಗುತ್ತಿದ್ದವು. ಇಲ್ಲವೆ, ಕೆಲ ವಲಯಗಳು ಮತ್ತು ಇಲಾಖೆಗಳನ್ನು ಮಾತ್ರ ಗಮನದಲ್ಲಿರಿಸಿಕೊಂಡು ಸುಧಾರಣೆಗಳನ್ನು ಮಾಡಲಾಗುತ್ತಿತ್ತು ಎಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ