ಉಗ್ರ ಪೊಷಣೆ ಕುರಿತು ನೆರೆ ರಾಷ್ಟ್ರದಿಂದ ಬಹಿರಂಗ ತಪೊಪ್ಪಿಗೆ ಪಾಕಿಸ್ಥಾನದಲ್ಲೇ ಇದ್ದಾರೆ ಮುಂಬೈ ದಾಳಿಯ 11 ಭಯೋತ್ಪಾದಕರು !

ಹೊಸದಿಲ್ಲಿ: ಮುಂಬೈ ಉಗ್ರ ದಾಳಿಯನ್ನು ಸುಗಮಗೊಳಿಸಿದ 11 ಭಯೋತ್ಪಾದಕರು ತನ್ನ ನೆಲದಲ್ಲಿಯೇ ಇದ್ದಾರೆ ಎಂಬುದನ್ನು ಸ್ವತಃ ಪಾಕಿಸ್ಥಾನ ಒಪ್ಪಿಕೊಂಡಿದೆ. ಆದರೆ, ಭಾರತಕ್ಕೆ ಬೇಕಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕರಾದ ಹಫೀಜ್ ಸಯೀದ್ ಆಗಲಿ, ಮಸೂದ್ ಅಜರ್ ಆಗಲಿ ಅಥವಾ ದಾವೂದ್ ಇಬ್ರಾಹಿಂ ಇರುವಿಕೆ ಬಗ್ಗೆ ಮಾತ್ರ ಪಾಕ್ ಯಾವುದೇ ಹೇಳಿಕೆ ನೀಡದೆ ತನ್ನ ನರಿ ಬುದ್ಧಿಯನ್ನು ಪ್ರದರ್ಶಿಸಿದೆ.
ಪಾಕಿಸ್ಥಾನದ ಉನ್ನತ ತನಿಖಾ ಪ್ರಾಕಾರವಾದ ಎಫ್‍ಐಎ (ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ) ಬುಧವಾರ, ಮುಂಬೈ ಭಯೋತ್ಪಾದಕ ದಾಳಿಯನ್ನು ಸುಗಮಗೊಳಿಸಿದ 11 ಉಗ್ರರು ದೇಶದಲ್ಲಿಯೇ ಇದ್ದಾರೆ ಎಂದು ಒಪ್ಪಿಕೊಂಡಿದೆ. ಅದರಂತೆ, ಎಫ್‍ಐಎ ತಯಾರಿಸಿರುವ 880 ಪುಟಗಳ ಪಟ್ಟಿಯಲ್ಲಿ 2008ರ ಭಯೋತ್ಪಾದಕ ದಾಳಿಯಲ್ಲಿ ಮುಲ್ತಾನ್‍ನ ಮೊಹಮ್ಮದ್ ಅಮ್ಜದ್ ಖಾನ್ ಭಾಗಿಯಾಗಿದ್ದ ಎಂದು ತಿಳಿಸಿದೆ.
ಭಾರತದ ವಾಣಿಜ್ಯ ರಾಜಧಾನಿ ಮುಂಬೈ ದಾಳಿಗಾಗಿ ಉಗ್ರ ಅಮ್ಜದ್ ಕರಾಚಿಯಲ್ಲಿ ಯಮಹ ಮೋಟಾರ್ ಬೋಟ್ ಇಂಜಿನ್, ಜಾಕೆಟ್‍ಗಳು ಸೇರಿದಂತೆ ಇತರೆ ವಸ್ತುಗಳನ್ನು ಸಹ ಖರೀದಿಸಿದ್ದ. ಅದೇ ರೀತಿ ಬಹವಲ್ಪುರದ ಶಾಹಿದ್ ಗಫೂರ್‍ನ ಬಗ್ಗೆಯೂ ಎಫ್‍ಐಎ ಉಗ್ರರ ಪಟ್ಟಿಯಲ್ಲಿ ಉಲ್ಲೇಖಿಸಿದೆ.
ಇದಲ್ಲದೆ, ಪಟ್ಟಿಯಲ್ಲಿ ಮುಂಬೈ ದಾಳಿಗಾಗಿ ಬಳಸಲಾಗಿದ್ದ ಹಡಗಿನ 9 ಸದಸ್ಯರ ಬಗ್ಗೆಯೂ ಎಫ್‍ಐಎ ತಿಳಿಸಿದೆ.
ಪಟ್ಟಿಯಲ್ಲಿ 1210 ಹೈ ಪೊಫೈಲ್ ಮತ್ತು ಮೋಸ್ಟ್ ವಾಂಟೆಡ್ ಭಯೋತ್ಪಾದಕರನ್ನು ಹೆಸರಿಸಿದೆಯಾದರೂ ಭಾರತಕ್ಕೆ ಬೇಕಿರುವ ಹಫೀಜ್ ಸಯೀದ್, ಮಸೂದ್ ಅಜರ್ ಮತ್ತು ದಾವೂದ್ ಇಬ್ರಾಹಿಂ ಬಗ್ಗೆ ಎಫ್‍ಐಎ ಉಲ್ಲೇಖಿಸಿಯೇ ಇಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ