ನೌಕರರ ಮುಷ್ಕರದಿಂದಾಗಿ ನಾಲ್ಕು ಸಾರಿಗೆ ನಿಗಮಗಳಿಗೆ 45ಕೋಟಿ ರೂ. ನಷ್ಟ ! ಸಾರಿಗೆ ಬಿಕ್ಕಟ್ಟಿಗೆ ತೆರೆ

ಬೆಂಗಳೂರು: ಸಾರಿಗೆ ನೌಕರರ ಮತ್ತು ಸರ್ಕಾರದ ನಡುವಿನ ಬಿಕ್ಕಟ್ಟಿಗೆ ತೆರೆ ಬಿದ್ದು ಬಸ್‍ಗಳು ರಸ್ತೆಗಿಳಿಯುವ ಮೂಲಕ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ. ಇನ್ನೊಂದೆಡೆ ನೌಕರರ ಮುಷ್ಕರದಿಂದಾಗಿ ನಾಲ್ಕು ಸಾರಿಗೆ ನಿಗಮಗಳಿಗೆ ಒಟ್ಟು 45ಕೋಟಿ ರೂ. ನಷ್ಟ ಸಂಭವಿಸುವ ಮೂಲಕ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವುದು ಸೇರಿದಂತೆ ಒಟ್ಟು 10ರಿಂದ 12 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಬೇಡಿಕೆ ಈಡೇರಿಸುವಂತೆ ಏಕಾಏಕಿಯಾಗಿ ನೌಕರರು ಮುಷ್ಕರ ಹೂಡಿದ್ದು, ಸರ್ಕಾರ ಹಾಗೂ ನೌಕರರ ನಡುವೆ ನಡೆದ ಸಭೆಯಲ್ಲಿ 8 ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರೂ ನೌಕರರು ಮುಷ್ಕರ ಮುಂದುವರಿಸಿದ್ದರು. ಅದರಂತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಡಿ.14ರಂದು ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಮುಷ್ಕರನಿರತ ಇನ್ನಿತರ ಮುಖಂಡರನ್ನು ವಿಶ್ವಾಸಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.
ಅಲ್ಲದೆ, ಕೇವಲ ಬಾಯಿ ಮಾತಲ್ಲಿ ಬೇಡಿಕೆ ಈಡೇರಿಸುತ್ತೇವೆ ಎಂದು ಹೇಳಿದರೆ ಸಾಲದು ಲಿಖಿತ ರೂಪದಲ್ಲಿ ಪತ್ರ ಬರೆದು ನೀಡಬೇಕು ಎಂದು ನೌಕರರು ಫ್ರೀಡಂಪಾರ್ಕ್‍ನಲ್ಲಿ ಪಟ್ಟು ಹಿಡಿದ ಹಿನ್ನೆಲೆ ಸಾರಿಗೆ ಸಚಿವರು, ಭರವಸೆ ನೀಡಿದ್ದ ಅಷ್ಟೂ ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತ ರೂಪದಲ್ಲಿ ನೀಡಲಾಗಿದ್ದ ಪತ್ರ ಬರೆದು ಬಿಎಂಟಿಸಿ ನೌಕರರ ಸಂಘದ ಅಧ್ಯಕ್ಷ ನಂದೀಶ್ ರೆಡ್ಡಿಗೆ ನೀಡಲಾಗಿ, ಅವರು ಫ್ರೀಡಂಪಾರ್ಕ್‍ನಲ್ಲಿದ್ದ ಮುಷ್ಕರ ನಿರತರಿಗೆ ನೀಡುವ ಮೂಲಕ ನೌಕರರ ಮುಷ್ಕರ ಅಂತ್ಯಗೊಂಡಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ