ಪಕ್ಷದ ಶಾಸಕರೊಂದಿಗೆ ಇಂದು, ನಾಳೆ ಸಿಎಂ ಸಭೆ

ಬೆಂಗಳೂರು: ರಾಜ್ಯ ಬಿಜೆಪಿ ಕಾರ್ಯಕಾರಿಣಿ ಬೆನ್ನಲ್ಲೇ ಪಕ್ಷದ ಶಾಸಕರೊಂದಿಗೆ ಸಭೆ ನಡೆಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧರಿಸಿದ್ದು, ಜ.4 ಮತ್ತು 5 ರಂದು ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ.
ರಾಜ್ಯ ನಾಯಕತ್ವದ ಕುರಿತು ಕೇಂದ್ರ ನಾಯಕರು ಸಂತೃಪ್ತಿ ವ್ಯಕ್ತಪಡಿಸಿದ್ದು, ನಾಯಕತ್ವದ ಬದಲಾವಣೆ ಬಗ್ಗೆ ಇದ್ದ ಊಹಾಪೊಹಗಳಿಗೆ ತೆರೆ ಬಿದ್ದಿದೆ. ಗ್ರಾಪಂ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದಿರುವುದು ಬಲ ಬಂದಂತಾಗಿದೆ.
ಜ.11 ರಿಂದ 13 ರವರೆಗೆ ಗ್ರಾಮ ಸೇವಕ ಸಮಾವೇಶವೂ ನಡೆಯಲಿದ್ದು, 16 ಅಥವಾ 17 ರಂದು ನಡೆಯಲಿರುವ ಸಮಾರೋಪಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುವ ನಿರೀಕ್ಷೆ ಇದೆ.
ಇದೆಲ್ಲದರ ನಡುವೆ ಶಾಸಕರ ಅಹವಾಲು ಆಲಿಸುವ ಸಲುವಾಗಿಯೇ ಸೋಮವಾರ ಬೆಳಗ್ಗೆ 11ಕ್ಕೆ ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್‍ನಲ್ಲಿ ಸಭೆ ಕರೆದಿರುವ ಸಿಎಂ, ಎರಡು ದಿನಗಳ ಕಾಲ ಶಾಸಕರ ಸಮಸ್ಯೆಗಳನ್ನು ಕೇಳಿ, ಪರಿಹಾರ ಸೂಚಿಸಲಿದ್ದಾರೆ.
ಕೊರೋನಾ ಕಾರಣದಿಂದಾಗಿ ಶಾಸಕರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಕ್ಷೇತ್ರಸಂಚಾರ, ಪ್ರವಾಸ ಕಾರ್ಯಕ್ರಮಗಳೂ ಆಗಿರಲಿಲ್ಲ. ಈ ಎಲ್ಲ ಕಾರಣದಿಂದ ಶಾಸಕರ ಭೇಟಿಗೆ ಸಿಎಂ ಇಚ್ಛಿಸಿದ್ದು, ವಿಭಾಗವಾರು ಶಾಸಕರ ಸಭೆಗಳನ್ನು ಎರಡು ದಿನ ನಡೆಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ