10 ಮಂದಿಯ ಖಾತೆ ಅದಲು-ಬದಲು, ಹೆಚ್ಚುವರಿ ಹೊಣೆ ವಹಿಸಿದ ಸಿಎಂ ಸಪ್ತ ಸಚಿವರಿಗೆ ಖಾತೆ

Varta Mitra News

ಬೆಂಗಳೂರು:ಇತ್ತೀಚೆಗಷ್ಟೇ ಸಂಪುಟ ಸೇರಿದ ಏಳು ಸಚಿವರಿಗೆ ಖಾತೆ ಹಂಚಿಕೆ ಮಾಡಿರುವ ಸಿಎಂ, ಹಾಲಿ ಇದ್ದ ಕೆಲ ಸಚಿವರ ಖಾತೆಗಳನ್ನು ಅದಲು-ಬದಲು ಮಾಡಿದ್ದಾರೆ. ಇದರ ಬೆನ್ನಲ್ಲೇ ಒಂದಿಬ್ಬರು ತಮಗೆ ಬೇರೆ ಖಾತೆ ಬೇಕೆಂದು ಪಟ್ಟು ಹಿಡಿದರೂ, ನಂತರ ಹಿರಿಯ ಸಚಿವರ ಮನವೊಲಿಕೆಯಿಂದ ಖಾತೆ ವಹಿಸಿಕೊಳ್ಳಲು ಮುಂದಾಗಿದ್ದಾರೆ.
ತಮ್ಮ ಬಳಿ ಇದ್ದ ಕೆಲ ಖಾತೆಗಳನ್ನು ಸಿಎಂ ಹಂಚಿಕೆ ಮಾಡಿದ್ದು, ಪ್ರಮುಖ ಖಾತೆಗಳಾದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಹಣಕಾಸು, ಬೆಂಗಳೂರು ಅಭಿವೃದ್ಧಿ, ಇಂಧನ, ಯೋಜನೆ, ಸಾಂಖಿಕ, ಮೂಲಸೌಕರ್ಯ ಅಭಿವೃದ್ಧಿ ಹೊಣೆಗಾರಿಕೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಹೆಚ್ಚುವರಿಯಾಗಿ ಕಾನೂನು, ಸಂಸದೀಯ ವ್ಯವಹಾರ ಮತ್ತು ಶಾಸನರಚನಾ ಇಲಾಖೆಯನ್ನು ಕೊಡಲಾಗಿದೆ. ಈ ಖಾತೆಗಳಿಗೆ ಸಚಿವರಾಗಿದ್ದ ಜೆ.ಸಿ. ಮಾಧುಸ್ವಾಮಿ ಅವರಿಗೆ ವೈದ್ಯಕೀಯ ಶಿಕ್ಷಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಖಾತೆ ವಹಿಸಲಾಗಿದೆ. ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಡಾ.ಕೆ. ಸುಧಾಕರ್ ಅವರ ಬಳಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯೊಂದೇ ಉಳಿದಿದ್ದು, ಮಾಧುಸ್ವಾಮಿ ಅವರ ಬಳಿಯಿದ್ದ ಸಣ್ಣ ನೀರಾವರಿ ಖಾತೆಯು ಸಿ.ಪಿ. ಯೋಗೇಶ್ವರ ಅವರ ಹೆಗಲಿಗೇರಿದೆ.
ಇನ್ನುಳಿದಂತೆ ಕೆ.ಗೋಪಾಲಯ್ಯ ಅವರ ಬಳಿಯಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಯನ್ನು ಉಮೇಶ್ ಕತ್ತಿ ಅವರಿಗೆ ಕೊಟ್ಟಿದ್ದು, ಗೋಪಾಲಯ್ಯ ಅವರಿಗೆ ತೋಟಗಾರಿಕೆ ಹಾಗೂ ಕಬ್ಬು ಅಭಿವೃದ್ಧಿ ಖಾತೆ ಕೊಡಲಾಗಿದೆ.
ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮುಜರಾಯಿ ಖಾತೆಯ ಜೊತೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ನೀಡಿದ್ದು, ಹೆಚ್ಚುವರಿಯಾಗಿದ್ದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಖಾತೆಯನ್ನು ಹೊಸ ಸಚಿವ ಎಸ್.ಅಂಗಾರ ಅವರಿಗೆ ನೀಡಲಾಗಿದೆ.
ಆನಂದ್ ಸಿಂಗ್ ವಹಿಸಿದ್ದ ಅರಣ್ಯ ಖಾತೆಯನ್ನು ಅರವಿಂದ ಲಿಂಬಾವಳಿ ಅವರಿಗೆ ಕೊಟ್ಟಿದ್ದು, ಆನಂದ್ ಸಿಂಗ್ ಬಳಿ ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ಉಳಿಸಲಾಗಿದೆ. ಜೊತೆಗೆ ಸಿ.ಟಿ.ರವಿ ರಾಜೀನಾಮೆಯಿಂದ ತೆರವಾಗಿದ್ದ ಪ್ರವಾಸೋದ್ಯಮ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಸಿ.ಸಿ.ಪಾಟೀಲರ ಬಳಿಯಿದ್ದ ಗಣಿ ಮತ್ತು ಭೂ ವಿಜ್ಞಾನ ಖಾತೆಯು ಮುರುಗೇಶ್ ನಿರಾಣಿ ಪಾಲಾಗಿದ್ದು, ಸಣ್ಣ ಕೈಗಾರಿಕೆಯ ಜೊತೆಗೆ ಸಿಎಂ ಬಳಿ ಇದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸಿ.ಸಿ. ಪಾಟೀಲರಿಗೆ ನೀಡಲಾಗಿದೆ.
ಸಿ.ಟಿ.ರವಿ ರಾಜೀನಾಮೆಯಿಂದ ತೆರವಾಗಿದ್ದ ಕ್ರೀಡೆ ಮತ್ತು ಯುವಜನ ಸಬಲೀಕರಣ ಇಲಾಖೆಯನ್ನು ಕೆ.ಸಿ.ನಾರಾಯಣಗೌಡರಿಗೆ ನೀಡಿದ್ದು, ಪ್ರಭು ಚೌಹಾಣ್ ಬಳಿ ಹೆಚ್ಚುವರಿಯಾಗಿದ್ದ ಹಜ್ ಮತ್ತು ವಕ್ ಇಲಾಖೆಯನ್ನೂ ಕೊಡಲಾಗಿದೆ.
ಪ್ರಸ್ತುತ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಎನ್.ನಾಗೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಬಕಾರಿ ಮಂತ್ರಿ ಪದವಿಯು ಎನ್.ನಾಗರಾಜ್ (ಎಂಟಿಬಿ) ಅವರಿಗೆ ನೀಡಿದ್ದು, ಆರ್.ಶಂಕರ್ ಅವರಿಗೆ ಪೌರಾಡಳಿತ ಹಾಗೂ ರೇಷ್ಮೆ ಇಲಾಖೆ ದಕ್ಕಿದೆ.
ಶಿವರಾಂ ಹೆಬ್ಬಾರ್ ಬಳಿ ಕಾರ್ಮಿಕ ಇಲಾಖೆ ಮತ್ತು ಪ್ರಭು ಚೌಹಾಣ್ ಬಳಿಯಿದ್ದ ಪಶುಸಂಗೋಪನಾ ಖಾತೆಗಳನ್ನು ಅವರಲ್ಲಿಯೇ ಉಳಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ