ಜ.26ಕ್ಕೆ ಬೆಂಗಳೂರಿನಲ್ಲೂ ರೈತರಿಂದ ಟ್ರ್ಯಾಕ್ಟರ್ ಪರೇಡ್

ಬೆಂಗಳೂರು: ಗಣರಾಜ್ಯೋತ್ಸವದಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಟ್ರ್ಯಾಕ್ಟರ್ ಪರೇಡ್ ಬೆಂಬಲಿಸಿ ಜ.26ರಂದು ಬೆಂಗಳೂರಿನಲ್ಲಿಯೂ ರೈತರ ಬೃಹತ್ ರ್ಯಾಲಿ ನಡೆಯಲಿದೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಕೇಂದ್ರದ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಕಳೆದ ಎರಡು ತಿಂಗಳಿನಿಂದ ದಿಲ್ಲಿ ಗಡಿ ಭಾಗದಲ್ಲಿ ರೈತರ ಪ್ರತಿಭಟನೆಗಳು ನಡೆಯುತ್ತಿದೆ. ಇದುವರೆಗೆ ಕೇಂದ್ರ ಸರ್ಕಾರ ಕಾಯ್ದೆಗಳನ್ನು ಹಿಂಪಡೆಯುವ ನಿಲುವು ವ್ಯಕ್ತಪಡಿಸದಿರುವುದು ವಿಷಾದನೀಯ ಎಂದರು.
ಇದೇ ಕಾರಣದಿಂದ ಜ26ರ ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ಪರೇಡ್ ನಡೆಸಲು ರಾಷ್ಟ್ರ ಮಟ್ಟದಲ್ಲಿ ರೈತರು ತೀರ್ಮಾನಿಸಿದ್ದು, ಇದಕ್ಕೆ ನಮ್ಮ ಬೆಂಬಲವೂ ಇದೆ. ಕರ್ನಾಟಕದಲ್ಲಿಯೂ ಟ್ರ್ಯಾಕ್ಟರ್ ಪರೇಡ್ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಭಾಷಣ ಮುಗಿದ ಕೂಡಲೇ ನಾಡಿನ ವಿವಿಧ ಪ್ರದೇಶಗಳಿಂದ ಆಗಮಿಸಲಿರುವ 25 ಸಾವಿರಕ್ಕೂ ಅಕ ರೈತರು, ಟ್ರ್ಯಾಕ್ಟರ್ ಮತ್ತಿತರ ವಾಹನಗಳ ಮೂಲಕ ತುಮಕೂರು ರಸ್ತೆ, ನೆಲಮಂಗಲ, ಯಶವಂತಪುರ, ಮಲ್ಲೇಶ್ವರ ಮಾರ್ಗವಾಗಿ ಸ್ವಾತಂತ್ರ್ಯ ಉದ್ಯಾನವನ ತಲುಪಲಿದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಎಪಿಎಂಸಿ ಮತ್ತು ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಲಿದ್ದೇವೆ ಎಂದು ಮಾಹಿತಿ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ