ರಾಜಧಾನಿಯಲ್ಲಿ ಮೆರವಣಿಗೆ, ಬೃಹತ್ ಸಭೆ ನಡೆಸಿದ ಕಾಂಗ್ರೆಸ್ – ಕಿಕ್ಕರ್ ಕೃಷಿ ಕಾಯ್ದೆಗಳ ವಿರುದ್ಧ ಕೈ ಶಕ್ತಿ ಪ್ರದರ್ಶನ

ಬೆಂಗಳೂರು: ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಕೆಪಿಸಿಸಿ ರೈತ ಘಟಕ ಬುಧವಾರ ಆಯೋಜಿಸಿದ್ದ ರಾಜಭವನ ಚಲೋ ಕಾರ್ಯಕ್ರಮವನ್ನು ಕಾಂಗ್ರೆಸಿಗರು ಸರ್ಕಾರದ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಬಳಸಿಕೊಂಡರು. ರಾಜಭವನ ಮುತ್ತಿಗೆ ಹಾಕಲು ಯತ್ನಿಸಿದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ಮಾರ್ಗ ಮಧ್ಯೆ ಬಂಸಿದರು. ಇದಕ್ಕೂ ಮುನ್ನ ಆಯೋಜಿಸಿದ್ದ ಸಭೆಯಲ್ಲಿ ಹಿರಿಯ ಕಾಂಗ್ರೆಸಿಗರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕೋವಿಡ್-19 ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಸಂಘಟಿಸಿತ್ತು. ರೈಲ್ವೆನಿಲ್ದಾಣದಿಂದ ಬೃಹತ್ ಸಂಖ್ಯೆಯಲ್ಲಿ ಆಗಮಿಸಿದ ಕಾರ್ಯಕರ್ತರು ಸ್ವಾತಂತ್ರ್ಯ ಉದ್ಯಾನಕ್ಕೆ ಪಾದಯಾತ್ರೆ ಮೂಲಕ ಸಮಾವೇಶದ ಸ್ಥಳ ತಲುಪಿದರು. ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಜನಸ್ತೋಮವನ್ನು ನೋಡಿ ಕೆಲ ಮುಖಂಡರು ಸರ್ಕಾರದ ವಿರುದ್ಧ ನಾನಾ ಆರೋಪಗಳನ್ನು ಮಾಡಿ ಚಪ್ಪಾಳೆ ಗಿಟ್ಟಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.
ಬುಧವಾರ ಬೆಳಗ್ಗೆ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರಾಜಭವನ ಚಲೋಗೆ ಅನುಮತಿ ಇಲ್ಲದಿದ್ದರೂ, ಕಾನೂನು ಉಲ್ಲಂಘಿಸಿ ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ನಿಲ್ಲಸಿ ಮನವಿ ಮಾಡಿದರೂ, ಕ್ಯಾರೇ ಎನ್ನದ ಕಾರ್ಯಕರ್ತರು ನೂಕಾಟ- ತಳ್ಳಾಟ ನಡೆಸಿದರು.
ರೈತರಿಗೆ ರಕ್ಷಣೆ ಇಲ್ಲ:ಡಿಕೆಶಿ
ಸಮಾವೇಶದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ದೇಶದಲ್ಲಿ ರೈತರಿಗೆ ರಕ್ಷಣೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನ್ನದಾತರ ಅಹವಾಲು ಆಲಿಸುತ್ತಿಲ್ಲ. ಇದಕ್ಕೆ ಭವಿಷ್ಯದಲ್ಲಿ ಬಿಜೆಪಿ ಭಾರಿ ಬೆಲೆ ತೆರೆಯಬೇಕಾಗುತ್ತದೆ. ಕೊರೊನಾ ಸಮಯಲ್ಲಿ ಬಿಜೆಪಿ ಸರ್ಕಾರಕ್ಕೆ ಜನಾಗರಿಕರು, ಕಾರ್ಮಿಕರಿಗೆ ರಕ್ಷಣೆ ನೀಡಲು ಸಾಧ್ಯವಾಗಲಿಲ್ಲ. ಬೆಂಬಲ ಬೆಲೆ, ಪರಿಹಾರ ಕೊಡಲು ಆಗಲಿಲ್ಲ. ಸರ್ಕಾರ ಬಂಡವಾಳ ಶಾಹಿಗಳ ಪರ ಕೆಲಸ ಮಾಡುತ್ತಿದೆ ಎಂದು ದೂರಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಕೃಷಿ ಕ್ಷೇತ್ರಕ್ಕೆ ಮಾರಕವಾದ ಕಾಯ್ದೆ ಗಳನ್ನು ವಾಪಸ್ ಪಡೆಯದಿದ್ದರೆ ರೈತರು ಧಂಗೆ ಹೇಳುವುದು ಖಚಿತ. ಕಳೆದ 58 ದಿನಗಳಿಂದ ರೈತರು ದೆಹಲಿಯಲ್ಲಿ ಹಗಲು-ರಾತ್ರಿ ಚಳವಳಿ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿಗೆ ಮನುಷ್ಯತ್ವ ಇದ್ದಿದ್ದರೆ ಚಳವಳಿಗಾರರನ್ನು ಕರೆಯಿಸಿ ಮಾತುಕತೆ ನಡೆಸಬಹುದಿತ್ತು. ಆದರೆ, ಆ ರೀತಿ ಮಾಡಲು ಪ್ರಧಾನಿ ವಿಫಲರಾಗಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ 2ನೇ ಸ್ವಾತಂತ್ರ್ಯ ಹೋರಾಟ ಮಾಡುವ ಪರಿಸ್ಥಿತಿ ಬಂದೊದಗಿದೆ. ಎರಡೂ ಕಡೆಯಿರುವ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಲು ರೈತರು ನಿರ್ಧರಿಸಿದ್ದಾರೆ ಎಂದರು.
ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಮಾಜಿ ಸಚಿವರಾದ ಕೃಷ್ಣಬೈರೇಗೌಡ, ಕೆ.ಜೆ.ಜಾರ್ಜ್, ಸಂಸದ ಡಿ.ಕೆ.ಸುರೇಶ್ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ