ಹತ್ತಕ್ಕೂ ಹೆಚ್ಚು ಸಂಘಟನೆಗಳಿಂದ ತೋಮರ್ ಭೇಟಿ | 3 ಕೃಷಿ ಕಾಯ್ದೆಗೆ ಬೆಂಬಲ ಘೋಷಣೆ ಕೃಷಿ ಕಾನೂನಿಗೆ ಇನ್ನಷ್ಟು ರೈತ ಸಂಘಟನೆಗಳ ಬಲ

ಹೊಸದಿಲ್ಲಿ: ಪಂಜಾಬ್ ಕೇಂದ್ರಿತ ಕೆಲವು ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಯ ಹಿನ್ನೆಲೆಗಳು ಒಂದೊಂದಾಗಿ ಬಯಲಿಗೆ ಬರುತ್ತಿರುವಂತೆಯೇ, ಇತ್ತ ಉತ್ತರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ, ಬಿಹಾರ, ಹರ್ಯಾಣದಂತಹ ವಿವಿಧ ರಾಜ್ಯಗಳ 10ಕ್ಕೂಹೆಚ್ಚು ರೈತ ಸಂಘಟನೆಗಳು ಕೇಂದ್ರಕ್ಕೆ ಮನವಿ ಸಲ್ಲಿಸಿ, ಕೇಂದ್ರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳಿಗೆ ತಮ್ಮ ಪೂರ್ಣ ಬೆಂಬಲವಿದೆ ಎಂದು ಘೋಷಿಸಿವೆ. ವಿಶೇಷವೆಂದರೆ ಈ ಎಲ್ಲ ಸಂಘಟನೆಗಳು ಆಲ್ ಇಂಡಿಯಾ ಕಿಸಾನ್ ಕೋ-ಆರ್ಡಿನೇಶನ್ ಕಮಿಟಿಗೆ ಸಂಯೋಜಿತವಾದವುಗಳೇ ಆಗಿವೆ .
ಹತ್ತಕ್ಕೂ ಹೆಚ್ಚು ಸಂಘಟನೆಗಳು ಸೋಮವಾರ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿ ಮಾಡಿ ಕೇಂದ್ರ ಜಾರಿಗೆ ತಂದಿರುವ ಮೂರು ರೈತಪರ ಕಾನೂನುಗಳನ್ನು ತಾವು ಪೂರ್ಣವಾಗಿ ಬೆಂಬಲಿಸುವುದಾಗಿ ತಿಳಿಸಿದರು. ಈ ಮೂಲಕ ಕಳೆದ 15ದಿನಗಳಲ್ಲಿ ದೇಶದ ರೈತರ ನಾಲ್ಕನೇ ಗುಂಪು ಈ ಕಾನೂನಿಗೆ ತಮ್ಮ ಬೆಂಬಲವನ್ನು ಘೋಷಿಸಿದಂತಾಗಿದೆ. ವಿಶೇಷವಾಗಿ ದಕ್ಷಿಣ ಭಾರತದ ರೈತರ ಸಂಘಟನೆಗಳು ಈ ಕಾನೂನನ್ನು ಬೆಂಬಲಿಸುತ್ತಿವೆ.
ದಿಲ್ಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ರೈತರಿಗಿಂತ , ಕಾಂಗ್ರೆಸ್ ಮತ್ತಿತರ ರಾಜಕೀಯ ಪಕ್ಷಗಳು, ಖಲಿಸ್ಥಾನಿ ಭಯೋತ್ಪಾದಕ ಗುಂಪುಗಳು, ಸಿಎಎ ವಿರುದ್ಧ ಪ್ರತಿಭಟಿಸುತ್ತಿದ್ದ ವಿಚ್ಛಿದ್ರಕಾರಿ ಶಕ್ತಿಗಳು ಸೇರಿದಂತೆ ಅನ್ಯ ಹಿತಾಸಕ್ತಿಗಳೇ ರೈತ ಪ್ರತಿಭಟನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂಬ ಗಂಭೀರ ಆರೋಪಗಳ ನಡುವೆ ಈ ಬೆಂಬಲ ವ್ಯಕ್ತವಾಗಲಾರಂಭಿಸಿರುವುದು ಗಮನ ಸೆಳೆದಿದೆ.
ಕೇರಳ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಬಿಹಾರ, ಉತ್ತರಪ್ರದೇಶ, ಹರ್ಯಾಣ ಮತ್ತಿತರ ರಾಜ್ಯಗಳ ಆಲ್ ಇಂಡಿಯಾ ಕಿಸಾನ್ ಕೋ-ಆರ್ಡಿನೇಶನ್ ಕಮಿಟಿಯ ಸದಸ್ಯರು ಮೋದಿ ಸರಕಾರ ರೈತರ ಕಲ್ಯಾಣಕ್ಕೆ ಪೂರಕವಾಗಿ ಈ ಮೂರು ಕೃಷಿ ಕಾನೂನುಗಳನ್ನು ತಂದಿದ್ದು, ಇದನ್ನು ನಾವು ಸ್ವಾಗತಿಸುವುದಾಗಿ ಹಾಗೂ ಬೆಂಬಲಿಸುವುದಾಗಿ ಲಿಖಿತವಾಗಿ ಮನವಿ ನೀಡಿ ಘೋಷಿಸಿರುವುದಾಗಿ ಕೃಷಿ ಸಚಿವ ತೋಮರ್ ಅನಂತರ ಸುದ್ದಿಗಾರರಿಗೆ ತಿಳಿಸಿದರು.
ಇದಕ್ಕೂ ಮುನ್ನ ಉತ್ತರಾಖಂಡದ ನೂರಕ್ಕೂ ಅಕ ರೈತರ ನಿಯೋಗವೊಂದು ಈ ಕಾನೂನುಗಳನ್ನು ಬೆಂಬಲಿಸುವುದಾಗಿ ಸಚಿವರನ್ನು ಭೇಟಿಯಾಗಿ ತಿಳಿಸಿದರೆ, ಹರ್ಯಾಣದ 29ರೈತ ನಾಯಕರ ನಿಯೋಗ ಶನಿವಾರ ಇಂತಹುದೇ ಬೆಂಬಲ ಘೋಷಿಸಿತ್ತು.ಅಷ್ಟೇ ಅಲ್ಲದೆ, ಈ ರೈತ ಪರ ಕಾನೂನುಗಳನ್ನು ಹಿಂಪಡೆದರೆ ಧರಣಿ ಸತ್ಯಾಗ್ರಹ ನಡೆಸುವುದಾಗಿಯೂ ಎಚ್ಚರಿಸಿತು. ಹರ್ಯಾಣದ ಭಾರತೀಯ ಕಿಸಾನ್ ಯೂನಿಯನ್‍ನ (ಮಾನ್)ನಾಯಕ ಗುಣಿ ಪ್ರಕಾಶ್ ಅವರು ಸಂಸತ್ತು ಸೆಪ್ಟೆಂಬರ್‍ನಲ್ಲಿ ಅನುಮೋದಿಸಿದ ಮೂರು ಕೃಷಿ ಕಾನೂನನ್ನು ಮುಂದುವರಿಸಬೇಕೆಂದು ಆಗ್ರಹಿಸಿದ್ದರು.
ಹಾಗೆಯೇ ಕಳೆದ ವಾರ , 116 ಕೃಷಿ ಮತ್ತು ಕೃಷಿ ಕೇಂದ್ರಿತ ಉತ್ಪಾದನಾ ಸಂಘಟನೆಗಳನ್ನು ಪ್ರತಿನಿಸುವ ಹರ್ ಕಿಸಾನ್ ಸಂಘಟನೆಯ ರೈತ ನಿಯೋಗ ಕೂಡಾ ಕೃಷಿ ಸಚಿವರನ್ನು ಭೇಟಿ ಮಾಡಿ ನಮ್ಮ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಬೇಕೆಂದು ಕೋರಿತ್ತು. ಹರ್ಯಾಣದ ರೈತರು ಕೇಂದ್ರ ಸರಕಾರ ಜಾರಿಗೆ ತಂದಿರುವ ಯಾವುದೇ ಕೃಷಿ ಕಾನೂನು ತಿದ್ದುಪಡಿಗಳನ್ನು ವಿರೋಸುವುದಿಲ್ಲ . ಬದಲಿಗೆ ಇವುಗಳ ಅನುಷ್ಟಾನವನ್ನು ಬಯಸುತ್ತಿವೆ ಎಂದು ಅವರು ಸ್ಪಷ್ಟಪಡಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ