ಹೊಸದಿಲ್ಲಿ :ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ಮುಂಚೂಣಿಲ್ಲಿದ್ದು, ಚೇತರಿಕೆ ಪ್ರಮಾಣ ಹೆಚ್ಚುತ್ತಿರುವುದರ ಜತೆಗೆ ಸಕ್ರಿಯ ಸೋಂಕು ಪ್ರಕರಣಗಳಲ್ಲಿಯೂ ಗಣಿನೀಯ ಇಳಿಕೆ ದಾಖಲಿಸಿದೆ. ಇದೇ ಮೊದಲ ಬಾರಿಗೆ ಎರಡು ತಿಂಗಳ ಬಳಿಕ ಸಕ್ರಿಯ ಸೋಂಕಿತರ ಸಂಖ್ಯೆ 7 ಲಕ್ಷಕ್ಕಿಂತ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.
ಆಗಸ್ಟ್ 22ರಲ್ಲಿ ಸಕ್ರಿಯಸೋಂಕಿತರ ಸಂಖ್ಯೆ 6,97,330 ಆಗಿದ್ದು, ಆ ಬಳಿಕ ದಿನದಿಂದ ದಿನಕ್ಕೆ ಈ ಸಂಖ್ಯೆ ಹೆಚ್ಚುತ್ತಲೇ ಹೋಗಿತ್ತು.ನಂತರ ಎರಡು ತಿಂಗಳ ಬಳಿಕ ಅಕ್ಟೋಬರ್ನಲ್ಲಿ ಸಕ್ರಿಯ ಪ್ರಕರಣಗಳು 6,95,509 ಆಗಿದ್ದು, ದೇಶದಲ್ಲಿ ಸಕ್ರಿಯ ಸೋಂಕಿತರ ಪ್ರಮಾಣ ಶೇ.8.96ರಷ್ಟಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ದಿನನಿತ್ಯ ಚೇತರಿಕೆ ಪ್ರಮಾಣದ ಹೆಚ್ಚಳ ಹಾಗೂ ಸೋಂಕಿನಿಂದ ಮೃತರಾಗುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆ ಸಕ್ರಿಯ ಸೋಂಕಿತರ ಸಂಖ್ಯೆಯಲ್ಲೂ ಇಳಿಕೆ ದಾಖಲಾಗುತ್ತಿದೆ. ಇನ್ನು ಚೇತರಿಕೆ ಹೊಂದುತ್ತಿರುವವರ ಸಂಖ್ಯೆಯೂ 70ಲಕ್ಷದ ಗಡಿ ಸಮೀಪಿಸಿದ್ದು, ಸಕ್ರಿಯ ಸೋಂಕಿತರಿಗಿಂತ ಚೇತರಿಕೆ ಪ್ರಮಾಣ 10 ಪಟ್ಟು ಹೆಚ್ಚಾಗಿದೆ. ಕಳೆದ 24 ಗಂಟೆಯಲ್ಲಿ 73,979 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಹಾಗೂ ಇದೇ ಅವಯಲ್ಲಿ 54,366 ಹೊಸ ಸೋಂಕು ಪ್ರಕರಣ ದಾಖಲಾಗಿವೆ ಎನ್ನಲಾಗಿದೆ. ಪ್ರಸಕ್ತ ದೇಶದಲ್ಲಿ ಚೇತರಿಕೆ ಪ್ರಮಾಣ ಶೇ. 89.53ಆಗಿದೆ. ಇನ್ನು ಸೋಂಕಿನಿಂದ ಮೃತರಾಗುತ್ತಿರುವವರ ಪ್ರಮಾಣವೂ ಶೇ.1.51 ಆಗಿದೆ.