6 ರಾಜ್ಯಕ್ಕೆ 4,832 ಕೋಟಿ ರೂ. ಮಂಜೂರು | ಬಂಗಾಳಕ್ಕೆ ಹೆಚ್ಚು ರಾಜ್ಯಕ್ಕೆ 577 ಕೋಟಿ ನೆರೆ ಪರಿಹಾರ

ಹೊಸದಿಲ್ಲಿ: ಪ್ರಸಕ್ತ ವರ್ಷದಲ್ಲಿ ನೈಸರ್ಗಿಕ ವಿಪತ್ತಿನಿಂದ ಹಾನಿಗೊಳಗಾದ ಆರು ರಾಜ್ಯಗಳಿಗೆ ಪರಿಹಾರ ನೀಡುವ ದಿಸೆಯಲ್ಲಿ ಕೇಂದ್ರ ಸರ್ಕಾರ 4,832 ಕೋಟಿ ರೂ. ನೆರೆ ಪರಿಹಾರ ಮಂಜೂರು ಮಾಡಿದ್ದು, ಕರ್ನಾಟಕಕ್ಕೆ 577.84 ಕೋಟಿ ರೂ. ಘೋಷಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ, ಪ್ರವಾಹ, ಚಂಡಮಾರುತ, ಭೂಕುಸಿತದಿಂದಾಗಿ ನಷ್ಟ ಅನುಭವಿಸಿದ ಪಶ್ಚಿಮಬಂಗಾಳ, ಒಡಿಶಾ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಸಿಕ್ಕಿಂ ಸೇರಿ ಆರು ರಾಜ್ಯಗಳಿಗೆ ನೆರೆ ಪರಿಹಾರ ಒದಗಿಸಲು ಅನುಮೋದನೆ ನೀಡಲಾಗಿದೆ.
ರಾಷ್ಟ್ರೀಯ ವಿಪತ್ತು ನಿಯಿಂದ(ಎನ್‍ಡಿಆರ್‍ಎಫ್) ರಾಜ್ಯಗಳಿಗೆ ಕೇಂದ್ರದಿಂದ ಹೆಚ್ಚುವರಿ ನೆರವು ನೀಡಲು ಉನ್ನತ ಮಟ್ಟದ ಸಮಿತಿ ಅನುಮೋದನೆ ನೀಡಿದೆ ಎಂದು ಕೇಂದ್ರ ಗೃಹ ಸಚಿವಾಲಯ ಟ್ವೀಟ್ ಮಾಡಿದೆ.
ಅಂಫಾನ್ ಚಂಡಮಾರುತದಿಂದ ಉಂಟಾದ ಹಾನಿಗಾಗಿ ಪಶ್ಚಿಮ ಬಂಗಾಳಕ್ಕೆ 2,707.77 ಕೋಟಿ ರೂ. ಮತ್ತು ಒಡಿಶಾಗೆ 128.23 ಕೋಟಿ ರೂ. ಪರಿಹಾರ ಮಂಜೂರು ಮಾಡಲಾಗಿದೆ. ನಿಸರ್ಗ ಚಂಡಮಾರುತದಿಂದ ಉಂಟಾದ ಹಾನಿಗಾಗಿ ಮಹಾರಾಷ್ಟ್ರಕ್ಕೆ 268.59 ಕೋಟಿ ರೂ. ಘೋಷಿಸಲಾಗಿದೆ.
ಅಂಫಾನ್ ಚಂಡಮಾರುತದ ನಂತರ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳ ಹಾಗೂ ಒಡಿಶಾಕ್ಕೆ ಭೇಟಿ ನೀಡಿದ್ದರು. ಈ ವೇಳೆ ಬಂಗಾಳಕ್ಕೆ 1,000 ಕೋಟಿ ರೂ., ಒಡಿಶಾಗೆ 500 ಕೋಟಿ ರೂ. ಪ್ರಧಾನಿ ತುರ್ತು ಪರಿಹಾರ ಘೋಷಿಸಿದ್ದು, ನೆರೆ ಪರಿಹಾರ ಬಿಡುಗಡೆ ಮಾಡಲಾಗಿತ್ತು. ಜತೆಗೆ ಚಂಡಮಾರುತದಿಂದ ಮೃತಪಟ್ಟವರ ಕುಟುಂಬಗಳಿಗೆ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ