ಕೋವಿಡ್ ಪರೀಕ್ಷಾ ಶುಲ್ಕ 400 ದಾಟದಿರಲಿ: ಸುಪ್ರೀಂಗೆ ಅರ್ಜಿ

ಹೊಸದಿಲ್ಲಿ : ಕೋವಿಡ್ ಪರೀಕ್ಷೆ ನೆಪದಲ್ಲಿ ವಸೂಲ್ಮಾಡಿರುವ ಅಪಾರ ದುಡ್ಡನ್ನು ರೋಗಿಗಳಿಗೆ ತಕ್ಷಣ ಮರಳಿಸುವಂತೆ ದೇಶಾದ್ಯಂತದ ಎಲ್ಲಾ ಸರಕಾರಿ,ಖಾಸಗಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳಿಗೆ ನಿರ್ದೇಶವೀಯುವಂತೆ ಕೋರುವ ಅರ್ಜಿಯೊಂದನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಒರಿಸ್ಸಾ ಸರಕಾರದ ಕ್ರಮದಂತೆ, ದೇಶದೆಲ್ಲೆಡೆ ಕೋವಿಡ್ ಪರೀಕ್ಷಾ ಶುಲ್ಕವನ್ನು ಸಮಾನವಾಗಿ 400ರೂಗಳಿಗೆ ನಿಗದಿಪಡಿಸುವಂತೆ ವಕೀಲ ಅಜಯ್ ಅಗರ್‍ವಾಲ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಆಗ್ರಹಿಸಿದ್ದಾರೆ.
ಅಗರ್‍ವಾಲ್ ಇದೇ ಆಗ್ರಹ ಮುಂದಿಟ್ಟು ಸರ್ವೋಚ್ಚ ನ್ಯಾಯಾಲಯಕ್ಕೆ ಈಗಾಗಲೆ ಸಲ್ಲಿಸಿರುವ ಅರ್ಜಿಯೊಂದು ವಿಚಾರಣೆಗೆ ಬಾಕಿ ಇರುವಂತೆಯೇ , ಪ್ರಸ್ತುತ ಅರ್ಜಿಯನ್ನು ಶನಿವಾರ ಸಲ್ಲಿಸಲಾಗಿದೆ. ಅರ್ಜಿ ಪರಿಶೀಲಿಸಿದ್ದ ಭಾರತದ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೋಬ್ಡೆ ನೇತೃತ್ವದ ತ್ರಿಸದಸ್ಯ ಪೀಠ, ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ನ.26ರಂದು ಕೇಂದ್ರ ಸರಕಾರಕ್ಕೆ ನೋಟೀಸ್ ಜಾರಿ ಮಾಡಿತ್ತು.
ಕೋವಿಡ್ ಪರೀಕ್ಷೆಗೆ ತಗಲುವ ವೆಚ್ಚ ಬರೇ 200 ರೂ. ಆದರೆ ವಿವಿಧ ರಾಜ್ಯ ಸರಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ದಿಲ್ಲಿಯಲ್ಲೂ 900ರಿಂದ 2800 ಮೀರಿ ಪರೀಕ್ಷಾ ಶುಲ್ಕ ವಸೂಲಾಡಲಾಗುತ್ತಿದೆ. ಪ್ರಯೋಗಾಲಯಗಳಂತೂ ಕೋಟಿಗಟ್ಟಲೆ ದುಡ್ಡು ಸುಲಿಯುತ್ತಿವೆ.ಲಾಭದ ಮಾರ್ಜಿನ್ ಆಂಧ್ರಪ್ರದೇಶದಲ್ಲಿ 1400 ಶೇಕಡಾದಷ್ಟು ಅತ್ಯಕವಿದ್ದರೆ, ದಿಲ್ಲಿಯಲ್ಲಿ 1200 ಶೇಕಡಾ ಇದೆ ಎಂದು ಈ ಹಿಂದಿನ ಅರ್ಜಿಯಲ್ಲಿ ದೂರಲಾಗಿತ್ತು.
ಇದು ದೇಶದ 135ಕೋಟಿ ಜನರಿಗೆ ಸಂಬಂತ ವಿಷಯ. ಕೋವಿಡ್ ಬಗ್ಗೆ ಎಲ್ಲರಿಗೂ ಭಯವಿದೆ. ಸೋಂಕು ಭಾದಿಸಿದಾಗ ಲಕ್ಷಗಟ್ಟಲೆ ದುಡ್ಡು ಸುರಿದು ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆಯನ್ನು ಸೃಜಿಸಿರುವುದು ಅನ್ಯಾಯವೆಂದು ಅರ್ಜಿದಾರ ವಕೀಲರು ಆರೋಪಿಸಿದ್ದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ