ವಿದೇಶ ಪ್ರವಾಸ ಮೊಟಕುಗೊಳಿಸಿದ ಪ್ರಧಾನಿ ಮೋದಿ

ನವದೆಹಲಿ: ಲೋಕಸಭಾ ಚುನಾವಣೆ ಮೇಲೆ ಹೆಚ್ಚಿನ ಗಮನ ಹರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ವಿದೇಶ ಪ್ರವಾಸಗಳನ್ನು ಮೊಟಕುಗೊಳಿಸಿದ್ದಾರೆ.

2019ರ ಮೊದಲ ನಾಲ್ಕು ತಿಂಗಳ ಕಾಲ ಅಂದರೆ ಲೋಕಸಭೆ ಮುಕ್ತಾಯವಾಗುವವರೆಗೂ ವಿದೇಶ ಪ್ರವಾಸ ಕೈಗೊಳ್ಳದಿರಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳೇ ಮಾಹಿತಿ ನೀಡಿದ್ದು, ಮುಂದಿನ ವರ್ಷದ ಆರಂಭದಲ್ಲಿ ಯಾವುದೇ ಪ್ರಮುಖ ವಿದೇಶ ಪ್ರವಾಸ ಆಯೋಜನೆ ಮಾಡದಂತೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ಅಲ್ಲದೆ ಮುಂದಿನ ವರ್ಷದ ಮೊದಲ ನಾಲ್ಕು ತಿಂಗಳ ಕಾಲ ಪ್ರಧಾನಿ ಮೋದಿ ಅವರು ಭಾಗವಹಿಸಲೇ ಬೇಕಾದ ಯಾವುದೇ ರೀತಿಯ ಪ್ರಮುಖ ಕಾರ್ಯಕ್ರಮಗಳೂ ಕೂಡ ಇಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಪ್ರಧಾನಿ ಮೋದಿ 14 ವಿದೇಶ ಪ್ರವಾಸ ಮಾಡಿದ್ದರು. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ 2019ರ ಲೋಕಸಭಾ ಚುನಾವಣೆ ಅತ್ಯಂತ ನಿರ್ಣಾಯಕವಾಗಿದ್ದು, ಈ ಹಿಂದೆ ನಡೆದ ಪಂಚ ರಾಜ್ಯಗಳ ಚುನಾವಣೆ ಮತ್ತು ಉತ್ತರ ಪ್ರದೇಶ ಲೋಕಸಭೆ ಉಪ ಚುನಾವಣೆ ಬಿಜೆಪಿಗೆ ಭಾರಿ ಪೆಟ್ಟು ನೀಡಿದೆ. ಬಿಜೆಪಿ ತನ್ನ ಹಿಡಿತದಲ್ಲಿದ್ದ ರಾಜಸ್ತಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್ ಘಡ ರಾಜ್ಯಗಳನ್ನು ಕಳೆದುಕೊಂಡಿತ್ತು. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2019ರ ಲೋಕಸಭಾ ಚುನಾವಣೆ ಬಿಜೆಪಿಗೆ ಸವಾಲಾಗಿ ಪರಿಣಮಿಸಿದೆ.

ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕರೂ ಕೂಡ ಆಗಿರುವ ಪ್ರಧಾನಿ ಮೋದಿ ಇದೇ ಕಾರಣಕ್ಕೆ ತಮ್ಮ ವಿದೇಶ ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ. ಮುಂಬರುವ ಜನವರಿ 21 ರಿಂದ 23ರವರೆಗೆ ವಾರಣಾಸಿಯಲ್ಲಿ ನಡೆಯಲಿರುವ ಪ್ರವಾಸಿ ಭಾರತೀಯ ದಿವಸ್ ಸಂಭ್ರಮಾಚರಣೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲ್ಲಿದ್ದಾರೆ.

PM Modi, 2019 LokSabha Election, Foreign visits

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ