ಜಿಎಸ್ ಟಿ ಸರಳ ಮತ್ತು ಸುಗಮಗೊಳಿಸುವ ಸೂಚನೆ ನೀಡಿದ ಪ್ರಧಾನಿ ಮೋದಿ

ಮುಂಬೈ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ )ಯನ್ನು ಇನ್ನಷ್ಟು ಸರಳೀಕರಣಗೊಳಿಸುವ ಕುರಿತು ಪ್ರಧಾನಿ ಮೋದಿ ಸೂಚನೆ ನೀಡಿದ್ದು, ಶೇಕಡ ಸಬ್-18 ಜಿಎಸ್‍ಟಿ ಸ್ಲ್ಯಾಬ್‍ನಲ್ಲಿ ಶೇ.99ರಷ್ಟು ವಸ್ತುಗಳನ್ನು ಒಳಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದಿದ್ದಾರೆ.

ಮುಂಬೈನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಜಿಎಸ್‍ಟಿ ಅನುಷ್ಠಾನಕ್ಕೂ ಮುನ್ನ ಉದ್ಯಮಿಗಳು 65 ಲಕ್ಷ ಸಂಖ್ಯೆಯಲ್ಲಿ ಮಾತ್ರ ನೋಂದಣಿಯಾಗಿದ್ದವು. ಈಗ ಅದು ಶೇ.55ರಷ್ಟು ಏರಿಕೆಯಾಗಿದೆ ಎಂದು ಅವರು ಅಂಕಿ-ಅಂಶ ನೀಡಿದರು.

ಜಿಎಸ್‍ಟಿಯನ್ನು ಮತ್ತಷ್ಟು ಸರಳಗೊಳಿಸುವ ಉದ್ದೇಶ ತಮ್ಮ ಸರ್ಕಾರಕ್ಕಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದೆಯೂ ಕೂಡ ಇದು ಮುಂದುವರೆಯಲಿದೆ. ಕೈಗಾರಿಕೆಗಳು ಸೇರಿದಂತೆ ಎಲ್ಲಾ ವರ್ಗದವರಿಗೂ ಜಿಎಸ್‍ಟಿ ವ್ಯವಸ್ಥೆಯನ್ನು ಸರಳ ಮತ್ತು ಸುಗಮಗೊಳಿಸುವುದು ನಮ್ಮ ಸರ್ಕಾರದ ಆದ್ಯತೆ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ಮುಂಬೈಯಲ್ಲಿ ಎರಡು ಮೆಟ್ರೋ ಮಾರ್ಗ ಹಾಗೂ ರಿಯಾಯಿತಿ ದರದ ವಸತಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.

2019ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಲ್ಯಾಣ್ ಮಂಥ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 15 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಮಹತ್ವಾಕಾಂಕ್ಷಿಯ ಥಾಣೆ- ಬಿವಾಂಡಿ- ಕಲ್ಯಾಣ್ ( ಮೆಟ್ರೋ 5) ಮತ್ತು ದಹಿಸರ್- ಮಿರಾ- ಬ್ಯಾಂಡರ್ ( ಮೆಟ್ರೋ9) ಮಾರ್ಗದ ಕಾಮಗಾರಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ನವಿ ಮುಂಬೈ ನಗರ ಯೋಜನಾ ಪ್ರಾಧಿಕಾರದಿಂದ ನಿರ್ಮಿಸಲಾಗುತ್ತಿರುವ 18 ಸಾವಿರ ಕೋಟಿ ರೂ. ಮೊತ್ತದ ಸಾಮೂಹಿಕ ವಸತಿ ಯೋಜನೆಗೆ ಪ್ರಧಾನಿ ಚಾಲನೆ ನೀಡಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್, ಕೇಂದ್ರ ನಗರಾಭಿವೃದ್ದಿ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಥಾಣೆ- ಬಿವಾಂಡಿ- ಕಲ್ಯಾಣ್ ಮೆಟ್ರೋ ಕಾರಿಡಾರ್ ನಲ್ಲಿ 2021ರೊಳಗೆ ಪ್ರತಿದಿನ 2.29 ಲಕ್ಷ ಪ್ರಯಾಣಿಕರು ಸಂಚಾರಿಸಲಿದ್ದಾರೆ ಎಂದು ಅಂದಾಜಿಸಲಾಗಿದ್ದು, ಎಲ್ಲಾ ರೈಲುಗಳಿಗೆ ಆರು ಬೋಗಿಗಳನ್ನು ಅಳವಡಿಸಲಾಗುತ್ತಿದೆ. ಈ ಕಾರಿಡಾರ್ ಲ್ಲಿ 17 ನಿಲ್ದಾಣಗಳಿವೆ. 10-3 ಕಿಲೋ ಮೀಟರ್ ಎತ್ತರಿಸಿದ ದಹಿಸರ್- ಮಿರಾ- ಬ್ಯಾಂಡರ್ ಕಾರಿಡಾರ್ ನಲ್ಲಿ 8 ನಿಲ್ದಾಣಗಳಿದ್ದು, 2022ರೊಳಗೆ ಇದು ಪೂರ್ಣಗೊಳ್ಳುವ ನಿರೀಕ್ಷೆಯಿದೆ.

PM Modi,Mumbai,foundation stone of two metro corridors,GST

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ