ಗುಜರಾತ್ ಗಲಭೆ ಪ್ರಕರಣ: ನರೇಂದ್ರ ಮೋದಿ ವಿರುದ್ಧದ ಅರ್ಜಿ ವಿಚಾರಣೆ ಜನವರಿ ಮೂರನೇ ವಾರದಿಂದ ಆರಂಭ

ನವದೆಹಲಿ: 2002ರಲ್ಲಿ ನಡೆದ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ವಿರುದ್ಧದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸಮ್ಮತಿ ಸೂಚಿಸಿದ್ದು, ಜನವರಿ ಮೂರನೇ ವಾರದಲ್ಲಿ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಗುಜರಾತ್ ಗಲಭೆಗಳಿಗೆ ಸಂಬಂಧಿಸಿದಂತೆ ನರೇಂದ್ರ ಮೋದಿ ಅವರಿಗೆ ವಿಶೇಷ ತನಿಖಾ ತಂಡವು ದೋಷಮುಕ್ತ ಎಂದು ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸಿ ಝಾಕಿಯಾ ಜಫ್ರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಇದಾಗಿದೆ.

ಗೋಧ್ರಾ ಗಲಭೆ ವೇಳೆ ಮೃತಪಟ್ಟ ಮಾಜಿ ಸಂಸದ ಇಶಾನ್ ಜಫ್ರಿ ಅವರ ಪತ್ನಿ ಝಾಕಿಯಾ, ಎಸ್ ಐಟಿ ನಿರ್ಧಾರ ಪ್ರಶ್ನಿಸಿ ಗುಜರಾತ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ,
ಅಕ್ಟೋಬರ್ 5, 2017ರಂದು ಹೈಕೋರ್ಟ್ ಈ ಅರ್ಜಿಯನ್ನು ತಳ್ಳಿಹಾಕಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಇದೀಗ ಅವರು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿ ಎ.ಎಂ. ಖಾನ್ ವಿಲ್ಕಾರ್ ಮತ್ತು ನ್ಯಾಯಮೂರ್ತಿ ಹೇಮಂತ್ ಗುಪ್ತ ಅವರಿದ್ದ ವಿಭಾಗೀಯ ಪೀಠವು ಜನವರಿ ಮೂರನೇ ವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ.

Gujarat riots, PM Modi,Supreme court

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ