ಭೋಪಾಲ್: ಮಧ್ಯಪ್ರದೇಶದಲ್ಲಿ ನೂತನ ಸರ್ಕಾರ ರಚನೆಯ ಗೊಂದಲಕ್ಕೆ ತೆರೆ ಬಿದ್ದಿದ್ದು, ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರು 121 ಶಾಸಕರ ಪಟ್ಟಿಯೊಂದಿಗೆ ರಾಜ್ಯಪಾಲೆ ಆನಂದಿಬೇನ್ ಪಟೇಲ್ ಅವರನ್ನು ಭೇಟಿ ಮಾಡಿ ನೂತನ ಸರ್ಕಾರ ರಚನೆಯೆ ಹಕ್ಕು ಮಂಡಿಸಿದ್ದಾರೆ.
ಮಧ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಅವರು ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಶಾಸಕರೊಂದಿಗೆ ಸಭೆ ನಡೆಸಿದ ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿದರು.
ಬಿಎಸ್ ಪಿಯ ಇಬ್ಬರು, ಎಸ್ ಪಿಯ ಓರ್ವ ಶಾಸಕ ಹಾಗೂ ಎಲ್ಲಾ ನಾಲ್ವರು ಪಕ್ಷೇತರ ಶಾಸಕರು ಕಾಂಗ್ರೆಸ್ ಗೆ ಬೆಂಬಲ ಘೋಷಿಸಿದ್ದಾರೆ ಎಂದು ಮಧ್ಯ ಪ್ರದೇಶ ಕಾಂಗ್ರೆಸ್ ಮುಖ್ಯ ವಕ್ತಾರ ಶೋಭಾ ಒಜಾ ಅವರು ತಿಳಿಸಿದ್ದಾರೆ.
ನಾವು ಈಗಾಗಲೇ 114 ಸ್ಥಾನಗಳನ್ನು ಗೆದ್ದಿದ್ದು, ನಾಲ್ವರು ಪಕ್ಷೇತರರು, ಇಬ್ಬರು ಬಿಎಸ್ಪಿ ಮತ್ತು ಎಸ್ಪಿ ಒಬ್ಬ ಶಾಸಕ ಸೇರಿ ಒಟ್ಟು 121 ಶಾಸಕರ ಪಟ್ಟಿಯನ್ನು ರಾಜ್ಯಪಾಲರಿಗೆ ನೀಡಿದ್ದೇವೆ ಎಂದು ಒಜಾ ಹೇಳಿದ್ದಾರೆ.
230 ಸದಸ್ಯ ಬಲ ಹೊಂದಿರುವ ಮಧ್ಯ ಪ್ರದೇಶದಲ್ಲಿ ಬಹುಮತಕ್ಕೆ 116 ಸ್ಥಾನಗಳ ಅಗತ್ಯವಿದ್ದು, 114 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್ ಈಗ ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸುತ್ತಿದೆ.
madhyapradesh,congress,kamal nath,takes claim to form government,