ಬರ ಪೀಡಿತ ಪ್ರದೇಶಗಳಿಗೆ ನೀರು ಸರಬರಾಜಿನ ವೆಚ್ಚವನ್ನು ಸರ್ಕಾರವೇ ಭರಿಸಲಿದೆ, ಸಚಿವ ಕೃಷ್ಣ ಬೈರೇಗೌಡ

ಬೆಳಗಾವಿ (ಸುವರ್ಣಸೌಧ), ಡಿ.12- ಬರ ಪೀಡಿತ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟ ಪಡಿಸಿದರು.

ಬರ ಪರಿಸ್ಥಿತಿ ಕುರಿತು ವಿಧಾನಸಭೆಯಲ್ಲಿ ಬಿಜೆಪಿ ಹಿರಿಯ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಮನ ಸೆಳೆದಾಗ, ಉತ್ತರ ನೀಡಿದ ಸಚಿವರು, ಕುಡಿಯುವ ನೀರಿನ ಕಾಮಗಾರಿಗಳಿಗೆ ಜಿಲ್ಲಾ ಪಂಚಾಯತ್‍ನಲ್ಲಿ 1700 ಕೋಟಿ ಹಣ ಇದೆ.ಅದರಲ್ಲಿ ಶೇ.70ರಷ್ಟು ಕೆಲಸಗಳನ್ನು ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ.ಕುಡಿಯುವ ನೀರಿನ ತುರ್ತು ಕಾಮಗಾರಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಅನುಮತಿಗಾಗಿ ಕಾಯುವ ಅಗತ್ಯ ಇಲ್ಲ.

ತಹಸೀಲ್ದಾರ್ ಅವರೇ ನೇರವಾಗಿ ಅನುಮತಿ ನೀಡಬಹುದು, ಮೌಖಿಕ ಅನುಮತಿ ಪಡೆದು ಟ್ಯಾಂಕರ್ ಮೂಲಕ ನೀರು ಸರಬರಾಜು ಆರಂಭಿಸಬಹುದು.ಎರಡು ದಿನದಲ್ಲಿ ಕೊರತೆ ಇರುವ ಕಡೆಗೆ ನೀರು ಸರಬರಾಜು ಆರಂಭವಾಗಬೇಕು.ಆದರೆ ಉತ್ತಮ ಬೆಲೆಯತ್ತ ಅಧಿಕಾರಿಗಳು ಗಮನ ಹರಿಸಬೇಕು ಎಂದು ಹೇಳಿದರು.

ಕೊರತೆ ಇರುವ ಕಡೆ ಹೊಸದಾಗಿ ಬೋರ್‍ವೆಲ್ ಕೊರೆಯುತ್ತಾ ಕೂರಬೇಡಿ.ಅದರ ಬದಲು ಖಾಸಗಿ ಬೋರ್‍ವೆಲ್‍ಗಳನ್ನು ಬಾಡಿಗೆ ಪಡೆಯಬೇಕು.ಅದರ ಬಾಡಿಗೆ ವೆಚ್ಚವನ್ನು ಗ್ರಾಮ ಪಂಚಾಯತ್, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಭರಿಸಬೇಕಿಲ್ಲ. ಸರ್ಕಾರವೇ ನೇರವಾಗಿ ಬಾಡಿಗೆ ಭರಿಸಲಿದೆ ಎಂದರು.
ಮೊದಲ ಆದ್ಯತೆಯಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು, ಎರಡನೆ ಆದ್ಯತೆಯಾಗಿ ಬೋರ್‍ವೆಲ್ ಬಾಡಿಗೆ ಪಡೆಯಬೇಕು.ಮೂರನೆ ಆಧ್ಯತೆಯಾಗಿ ಶಾಸಕರ ನೇತೃತ್ವದಲ್ಲಿರುವ ಟಾಸ್ಕ್‍ಫೆÇರ್ಸ್ ಬಳಿ ಇರುವ ಅನುದಾನ ಬಳಸಿ ಬೋರ್‍ವೇಲ್ ಕೊರೆಸಬೇಕು ಎಂದು ಸಚಿರು ಹೇಳಿದರು.

ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪಂಚಾಯತ್ ಸಿಇಒಗಳಿಗೆ ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ.ಅವರ ಬಳಿ ಹಣವಿದೆ.ಆದರೆ ಕೆಳ ಹಂತದ ಅಧಿಕಾರಿಗಳು ಜನ ಸಾಮಾನ್ಯರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಸಚಿವರು ಅಸಮಾದಾನ ವ್ಯಕ್ತ ಪಡಿಸಿದರು.

ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಬಿಜೆಪಿಯ ಶಾಸಕ ವಿ.ಸೋಮಣ್ಣ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ