ರಾಜಸ್ಥಾನ: ಕಾಂಗ್ರೆಸ್ ಮಹತ್ವದ ಸಿಎಲ್ ಪಿ ಸಭೆ: ಸಂಜೆ ನೂತನ ಸಿಎಂ ಹೆಸರು ಗೋಷಣೆ

ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಮ್ಯಾಜಿಜ್ ಸಂಖ್ಯೆಗೆ ಇನ್ನೊಂದು ಸ್ಥಾನದ ಕೊರತೆಯಿರುವ ಹಿನ್ನಲೆಯಲ್ಲಿ ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಕಾಂಗ್ರೆಸ್ ಮುಂದಾಗಿದೆ.

ರಾಜಧಾನಿ ಜೈಪುರದಲ್ಲಿ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ನಿವಾಸದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ(ಸಿಎಲ್‍ಪಿ) ಮಹತ್ವದ ಸಭೆ ನಡೆದಿದೆ. ಮಾಜಿ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಮತ್ತು ರಾಜಸ್ತಾನ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಚಿನ್ ಪೈಲೆಟ್ ಸಿಎಂ ಹುದ್ದೆ ರೇಸ್‍ನಲ್ಲಿದ್ದು, ಸಿಎಲ್‍ಪಿ ಸಭೆಯಲ್ಲಿ ಎಐಸಿಸಿ ಮಹಾ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಮತ್ತು ಪಕ್ಷದ ವೀಕ್ಷಕ ಕೆ.ಸಿ.ವೇಣುಗೋಪಾಲ್ ಪಾಲ್ಗೊಂಡು ಪಕ್ಷದ ಶಾಸಕರ ಅಭಿಪ್ರಾಯಗಳನ್ನು ಪಡೆದಿದ್ದಾರೆ.

ಸಿಎಲ್‍ಪಿ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ವೀಕ್ಷಕರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ವಿವರಿಸಲಿದ್ದಾರೆ. ಶಾಸಕರು ಮತ್ತು ಮುಖಂಡರ ಅಭಿಪ್ರಾಯಗಳನ್ನು ಪಕ್ಷದ ಹೈಕಮಾಂಡ್‍ಗೆ ತಿಳಿಸಲಿದ್ದಾರೆ.

ಈ ಅಭಿಪ್ರಾಯಗಳನ್ನು ಆಧರಿಸಿ ರಾಹುಲ್ ಗಾಂಧಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಎರಡನೇ ಸಿಎಲ್‍ಪಿ ಸಭೆ ಸಂಜೆ ನಡೆಯಲಿದ್ದು, ಅದರಲ್ಲಿ ರಾಜಸ್ತಾನದ ನೂತನ ಮುಖ್ಯಮಂತ್ರಿ ಹೆಸರನ್ನು ಘೋಷಿಸಲಾಗುತ್ತದೆ.

ರಾಜಸ್ತಾನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ವಸುಂಧರಾ ರಾಜೆ ನೇತೃತ್ವದ ಬಿಜೆಪಿ 73 ಸ್ಥಾನಗಳನ್ನು ಗಳಿಸಿದೆ. ಬಿಎಸ್‍ಪಿ-6, ಸಿಪಿಐ(ಎಂ)-2, ಇತರ ಪಕ್ಷಗಳು-6 ಹಾಗೂ ಪಕ್ಷೇತರರು-13 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಗೆ ಒಂದು ಸ್ಥಾನದ ಕೊರೆತೆ ಇದ್ದ ಕಾರಣ ಈಗ ಬಿಎಸ್ ಪಿ ಕಾಂಗ್ರೆಸ್ ಗೆ ಬೆಂಬಲ ಘೋಷಿಸಿದ್ದು, ಒಟ್ಟಾರೆ ಪಕ್ಷೇತರರ ಬೆಂಬಲದೊಂದಿಗೆ ಕಾಂಗ್ರೆಸ್ ಸರ್ಕಾರ ರಚನೆಗೆ ಮಾಡಲಿದೆ.
Rajasthan election,Congress,CLP Meeting

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ