ಅವಿಶ್ವಾಸ ನಿರ್ಣಯ: ಸಂಸದರಿಗೆ ವಿಪ್ ಜಾರಿ ಮಾಡಿದ ಕಾಂಗ್ರೆಸ್, ಕಡ್ಡಾಯ ಹಾಜರಾತಿಗೆ ಸೂಚನೆ

ನವದೆಹಲಿ: ಕೇಂದ್ರಸರ್ಕಾರದ ವಿರುದ್ಧ ಟಿಡಿಪಿ ಪಕ್ಷ ಮಂಡಿಸಿರುವ ಅವಿಶ್ವಾಸ ನಿರ್ಣಯ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿರುವ ಕಾಂಗ್ರೆಸ್ ಪಕ್ಷ ತನ್ನ ಎಲ್ಲಾ ಸಂಸದರಿಗೂ ವಿಪ್ ಜಾರಿ ಮಾಡಿದೆ.
ಇಂದು ನಡೆಯುವ ಸಂಸತ್ ಕಲಾಪಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಕಾಂಗ್ರೆಸ್ ಪಕ್ಷ ತ್ರಿ ಲೈನ್ ವಿಪ್ ಜಾರಿ ಮಾಡಿದ್ದು, ಟಿಡಿಪಿ ಮಂಡಿಸಿರುವ ಅವಿಶ್ವಾಸ ನಿರ್ಣಯದ ಪರವಾಗಿ ಮತ ಹಾಕುವಂತೆ ಸೂಚಿಸಿದೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಜೂನ್ 17ರಂದು ವಿಪಕ್ಷಗಳಿಗೆ ಮನವಿ ಮಾಡಿಕೊಂಡಿದ್ದ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಎಲ್ಲ ಪ್ರತಿಪಕ್ಷಗಳು ಒಂದಾಗಿ ಕೇಂದ್ರ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಹೇಳಿದ್ದರು. ಇತ್ತೀಚೆಗಷ್ಟೇ ಆಮ್ ಆದ್ಮಿ ಪಕ್ಷ ಕೂಡ ತನ್ನ ಸಂಸದರಿಗೆ ವಿಪ್ ಜಾರಿ ಮಾಡಿದ್ದು, ಅವಿಶ್ವಾಸ ನಿರ್ಣಯದ ಪರ ಮತ ಹಾಕುವಂತೆ ಸೂಚಿಸಿದ್ದಾರೆ.
ವಿಪಶ್ರಗಳ ನಡೆಯಿಂದಾಗಿ ಅಧಿಕಾರದ ಗದ್ದುಗೆಗೆ ಏರಿದ ಬಳಿಕ ಪ್ರಧಾನಿ ಮೋದಿಗೆ ಲೋಕಸಭೆಯಲ್ಲಿ ಮೊದಲ ಬಾರಿಗೆ ಅಗ್ನಿ ಪರೀಕ್ಷೆ ಎದುರಾಗಿದೆ.
ಇನ್ನು ಕಾಂಗ್ರೆಸ್ ನಡೆಯನ್ನು ಟೀಕಿಸಿರುವ ಕೇಂದ್ರ ಸಚಿವ ಅನಂತ ಕುಮಾರ್ ಅವರು, ಕಾಂಗ್ರೆಸ್‌ಗೆ ಮತ್ತೆ ವಿಫಲ ಪ್ರಯತ್ನ ನಡೆಸುತ್ತಿದೆ. 1999ರಲ್ಲಿ ಆದ ಮುಖಭಂಗವು ಕಾಂಗ್ರೆಸ್‌ಗೆ ಮರುಕಳಿಸಲಿದೆ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ