ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ವದಂತಿ ಬೆನ್ನಲ್ಲೇ: ತಡರಾತ್ರಿ ವಲಸಿಗ ಸಚಿವರು ರಹಸ್ಯ ಸಭೆ

ಬೆಂಗಳೂರು,ಜು.20-ಒಂದು ಕಡೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಆಗಲಿದೆ ಎಂಬ ವದಂತಿ ಹಬ್ಬಿದ ಬೆನ್ನಲ್ಲೇ , ತಡರಾತ್ರಿ ವಲಸಿಗ ಸಚಿವರು ರಹಸ್ಯ ಸಭೆ ನಡೆಸಿದ್ದಾರೆ.

ಸಚಿವರಾದ ಡಾ.ಕೆ.ಸುಧಾಕರ್, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್, ಕೆ.ನಾರಾಯಣಗೌಡ ಸೇರಿದಂತೆ ಮತ್ತಿತರರು ಖಾಸಗಿ ಹೋಟೆಲ್‍ನಲ್ಲಿ ಸಭೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಸರ್ಕಾರ ಹಾಗೂ ಪಕ್ಷದೊಳಗೆ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಗೊತ್ತಾಗಿದೆ.

ಒಂದು ವೇಳೆ ವರಿಷ್ಠರ ಸೂಚನೆಯಂತೆ ಯಡಿಯೂರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಭವಿಷ್ಯದಲ್ಲಿ ತಮ್ಮ ಸ್ಥಾನಮಾನದ ಗತಿ ಏನು ಎಂದು ಕೆಲವು ಸಚಿವರು ಆತಂಕಗೊಂಡಿದ್ದರಿಂದ ಈ ಸಭೆಯನ್ನು ಕರೆಯಲಾಗಿತ್ತು ಎನ್ನಲಾಗಿದೆ.

ನಾವು ಯಡಿಯೂರಪ್ಪ ಅವರನ್ನು ನಂಬಿ ಕಾಂಗ್ರೆಸ್-ಜೆಡಿಎಸ್‍ಗೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಯಾಗಿದ್ದೇವು. ಉಪಚುನಾವಣೆಯಲ್ಲಿ ಗೆದ್ದು ಸಚಿವರಾಗಿದ್ದೇವೆ.

ಈಗ ಏಕಾಏಕಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಮುಂದೆ ಬರುವವರು ನಮಗೆ ಸರ್ಕಾರ ಹಾಗೂ ಪಕ್ಷದಲ್ಲಿ ಯಾವ ಸ್ಥಾನಮಾನ ನೀಡಬಹುದು ಎಂದು ಸಚಿವರು ಗಂಭೀರವಾಗಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರೆ ಇಡೀ ಸಂಪುಟವೇ ಬಿದ್ದು ಹೋಗಲಿದ್ದು, ಮತ್ತೆ ಹೊಸದಾಗಿ ಸಂಪುಟ ವಿಸ್ತರಣೆಯಾಗಬೇಕಾಗುತ್ತದೆ. ಆಗ ನಮ್ಮನ್ನು ತೆಗೆದುಕೊಳ್ಳುತ್ತಾರೋ ಇಲ್ಲವೆ ಪಕ್ಷ ಸಂಘಟನೆಗೆ ನಿಯೋಜನೆ ಮಾಡುತ್ತಾರೋ ಎಂಬ ಆತಂಕ ಮಿತ್ರಮಂಡಳಿಗೆ ಕಾಡಿದೆ.

ಯಡಿಯೂರಪ್ಪ ಅವರು ನಂಬಿದವರನ್ನು ಕೈಬಿಟ್ಟಿರಲಿಲ್ಲ. ಈಗ ಸಂಘ ಪರಿವಾರ ಇಲ್ಲವೇ ಆರ್‍ಎಸ್‍ಎಸ್ ಹಿನ್ನೆಲೆಯಿಂದ ಬಂದವರು ಮುಖ್ಯಮಂತ್ರಿಯಾದರೆ ಸಹಜವಾಗಿ ಸಂಘ ಪರಿವಾರ ಆರ್‍ಎಸ್‍ಎಸ್ ಹಿನ್ನೆಲೆ ಹಾಗೂ ಪಕ್ಷ ನಿಷ್ಠರಿಗೆ ಮಣೆ ಹಾಕಬಹುದು. ಇದರಿಂದ ತಮ್ಮ ಭವಿಷ್ಯಕ್ಕೆ ಎಲ್ಲಿ ಕಲ್ಲು ಬೀಳುತ್ತದೆಯೋ ಎಂಬ ಆತಂಕದಿಂದಲೇ ಚರ್ಚೆ ನಡೆಸಿದ್ದಾರೆ.

ಸಾಧ್ಯವಾದಷ್ಟು ಯಡಿಯೂರಪ್ಪ ಅವರ ನಾಯಕತ್ವವನ್ನು ಬದಲಾವಣೆ ಮಾಡದಂತೆ ವರಿಷ್ಠರಿಗೆ ಒತ್ತಡ ಹಾಕಬೇಕು. ದೆಹಲಿಗೆ ಹೋಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಬೇಕೆಂಬ ಚರ್ಚೆಯೂ ನಡೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ