ಮಧ್ಯಪ್ರದೇಶ: ಕಾಂಗ್ರೆಸ್ ಹಿರಿಯ ನಾಯಕ, ಕಮಲ್ ನಾಥ್ ಗೆ ಸಿಎಂ ಸ್ಥಾನ; ಜ್ಯೋತಿರಾಧಿತ್ಯ ಸಿಂಧ್ಯಾಗೆ ಉಪಮುಖ್ಯಮಂತ್ರಿ ಹುದ್ದೆ

ನವದೆಹಲಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿದ್ದು, ಈಗ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯತ್ತ ಕಾಂಗ್ರೆಸ್‌ ಗಮನ ಹರಿಸಿದೆ.

ಛತ್ತೀಸ್‌ಗಢ ಮತ್ತು ರಾಜಸ್ಥಾನದ ಎಲ್ಲ ಶಾಸಕರ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆಯ ಒಟ್ಟಾರೆ ಜವಾಬ್ದಾರಿಯನ್ನು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹೆಗಲಿಗೆ ಬಿಡಲಾಗಿದೆ. ಇನ್ನು ಮಧ್ಯ ಪ್ರದೇಶದಲ್ಲಿ ಸಿಎಂ ಗಾದಿಗೆ ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಆಯ್ಕೆ ಬಹುತೇಕ ಖಚಿತವಾಗಿದೆ. ಜ್ಯೋತಿರಾಧಿತ್ಯ ಸಿಂಧ್ಯಾ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವ ಸಾಧ್ಯತೆ ಇದೆ.

ಈ ಬಗ್ಗೆ ಕಾಂಗ್ರೆಸ್ ಪಕ್ಷದ ಮೂಲಗಳು ಮಾಹಿತಿ ನೀಡಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹಿರಿಯ ಮುಖಂಡ ಅನುಭವಿ ನಾಯಕ ಕಮಲ್ ನಾಥ್ ಅವರನ್ನೇ ಮುಖ್ಯಮಂತ್ರಿ ಸ್ಥಾನಕ್ಕೆ ಅಂತಿಮಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ಸಿಎಂ ರೇಸ್ ನಲ್ಲಿದ್ದ ಯುವ ನಾಯಕ ಜ್ಯೋತಿರಾಧಿತ್ಯ ಸಿಂಧ್ಯಾ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಮಧ್ಯ ಪ್ರದೇಶ ಸಿಎಂ ಆಯ್ಕೆಗಾಗಿ ಸ್ವತ: ರಾಹುಲ್ ಗಾಂಧಿ ಅವರೇ ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರನ್ನೂ ಪರಿಗಣನೆಗೆ ತೆಗೆದುಕೊಂಡು ಆಯ್ಕೆ ಮಾಡಿದ್ದಾರೆ. ಈ ಪೈಕಿ ಬಹುತೇಕ ಶಾಸಕರು ಕಮಲ್ ನಾಥ್ ಅವರ ಪರ ಒಲವು ತೋರಿಸಿದ್ದು ಇದೇ ಕಾರಣಕ್ಕೆ ಅವರನ್ನೇ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.

ಇನ್ನು ರಾಜಸ್ಥಾನದಲ್ಲಿ ಅಧಿಕಾರ ರಚನೆಗೆ ರಾಹುಲ್ ಗಾಂಧಿ ಹೊಸದೊಂದು ಪ್ಲಾನ್ ಮಾಡಿದ್ದು, ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ನಿರ್ಧರಿಸಲು ಪಕ್ಷದ ಕಾರ್ಯಕರ್ತರನ್ನು ಕರೆದು ರಾಹುಲ್‌ ಗಾಂಧಿ ಹೊಸ ತಂತ್ರವೊಂದನ್ನು ಅನುಸರಿಸುತ್ತಿದ್ದಾರೆ. ಕಾರ್ಯಕರ್ತರು ಆಡಿಯೋ ಸಂದೇಶದ ಮೂಲಕ ತಮ್ಮ ಆದ್ಯತೆಯ ಮುಖ್ಯಮಂತ್ರಿಯ ಹೆಸರನ್ನು ಹಂಚಿಕೊಳ್ಳಲು ತಿಳಿಸಿದ್ದಾರೆ.

Madhya Pradesh Assembly Election, Kamal Nath,jyotiraditya sindhya

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ