ತಿರುವನಂತಪುರಂ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಬಾಗಿಲು ತೆರೆದಿದ್ದು, ಇರುಮುಡಿ ಹೊತ್ತು ಶಬರಿಮಲೆಯತ್ತ ಆಗಮಿಸಿದ್ದ ಹಿಂದೂ ಐಕ್ಯವೇದಿ ರಾಜ್ಯ ಘಟಕದ ಅಧ್ಯಕ್ಷೆ ಕೆ ಪಿ ಶಶಿಕಲಾ ಅವರನ್ನು ಕೇರಳ ಪೊಲೀಸರು ಬಂಧಿಸಿರುವ ಹಿನ್ನಲೆಯಲ್ಲಿ ಕೇರಳ ಸರ್ಕಾರದ ವಿರುದ್ಧ ವಿಹೆಚ್ ಪಿ ಕಿಡಿಕಾರಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ವಿಹೆಚ್ಪಿ ರಾಜ್ಯ ಘಟಕದ ಅಧ್ಯಕ್ಷ ಎಸ್ ಜೆ ಆರ್ ಕುಮಾರ್ ಅವರು, ‘ಇಂದು ಶನಿವಾರ ನಸುಕಿನ 2.30ರ ವೇಳೆಗೆ ಶಬರಿಮಲೆ ಸಮೀಪದ ಮರಕ್ಕೂಟಂ ಎಂಬಲ್ಲಿ ಪೊಲೀಸರು ಹಿಂದೂ ಐಕ್ಯವೇದಿ ರಾಜ್ಯ ಘಟಕದ ಅಧ್ಯಕ್ಷೆಯಾಗಿರುವ ಕೆ ಪಿ ಶಶಿಕಲಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಶಶಿಕಲಾ ಅವರು ಇರುಮುಡಿಕಟ್ಟನ್ನು ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಒಯ್ಯುತ್ತಿದ್ದ ವೇಳೆ ಪೊಲೀಸರು ಅವರನ್ನು ಬಂಧಿಸಿದರು. ಅವರ ಜತೆಗೆ ಇನ್ನೂ ಕೆಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕೇರಳ ಸರಕಾರ ಶಬರಿಮಲೆ ದೇವಸ್ಥಾನವನ್ನು ನಾಶ ಮಾಡಲು ಯತ್ನಿಸುತ್ತಿದ್ದು, ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಅಂತೆಯೇ ಇಂದು ಬೆಳಗ್ಗಿನಿಂದ ಸಂಜೆಯ ತನಕ ನಡೆಯುವ ಮುಷ್ಕರದಿಂದ ಆವಶ್ಯಕ ಸೇವೆಗಳ ಮತ್ತು ಅಯ್ಯಪ್ಪ ಭಕ್ತರ ವಾಹನಗಳ ಸಂಚಾರಕ್ಕೆ ಯಾವುದೇ ಬಾಧೆ ಇರುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಇತ್ತ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಕೆ ಪಿ ಶಶಿಕಲಾ ಅವರು ಪೊಲೀಸ್ ಠಾಣೆಯಲ್ಲೇ ಸತ್ಯಾಗ್ರಹ ನಡೆಸುತ್ತಿದ್ದು, ಠಾಣೆಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಶಶಿಕಲಾ ಅವರನ್ನು ಇರಿಸಲಾಗಿರುವ ರನ್ನಿ ಪೊಲೀಸ್ ಠಾಣೆಗೆ ಹಿಂದೂ ಪರ ಕಾರ್ಯಕರ್ತರು ಘೆರಾವ್ ಹಾಕಿದ್ದು, ಸುಮಾರು 2000 ಕಾರ್ಯಕರ್ತ ದಂಡು ಠಾಣೆಯನ್ನು ಸುತ್ತುವರೆದಿದೆ. ಪ್ರತಿಭಟನಾಕಾರರನ್ನು ನಿಭಾಯಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
Sabarimala row,K P sasikala,arrested,VHP