ನಮ್ಮ ತಾಳ್ಮೆ ಪರೀಕ್ಷಿಸಬೇಡಿ: ವಿಹೆಚ್ ಪಿ ಎಚ್ಚರಿಕೆ

ಅಯೋಧ್ಯೆ: ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ. ಬಲವಂತವಾಗಿ ರಾಮಜನ್ಮ ಭೂಮಿಯನ್ನು ಕಬಳಿಸಲಾಗಿದ್ದು, ಕಬಳಿಸಿದ ಜಾಗದಲ್ಲಿ ನಮಾಜ್ ಮಾಡಲು ನಾವು ಯಾವಕಾರಣಕ್ಕೂ ಬಿಡುವುದಿಲ್ಲ. ಅಯೋಧ್ಯೆ ಹಿಂದೂಗಳ ಕ್ಷೇತ್ರವಾಗಿದೆ ಎಂದು ವಿಎಚ್‍ಪಿ ಉಪಾಧ್ಯಕ್ಷ ಚಂಪತ್ ರೈ ಹೇಳಿಕೆ ನೀಡಿದ್ದಾರೆ.

ಅಯೋಧ್ಯೆಯಲ್ಲಿ ಮಾತನಾಡಿರುವ ಅವರು, ಬಾಬರಿ ಮಸೀದಿ ಧ್ವಂಸದ ನಂತರ ರಾಮ ಮಂದಿರ ವಿವಾದ ಶುರುವಾಗಿದೆ ಎಂದು ಕೆಲವು ಬುದ್ಧಿಜೀವಿಗಳು ಹೇಳುತ್ತಿದ್ದಾರೆ. ಆದರೆ ರಾಮ ಮಂದಿರಕ್ಕಾಗಿ ಹೋರಾಟ 490 ವರ್ಷಗಳ ಹಿಂದೆಯೇ ಇತ್ತು. ಭೂಮಿಯನ್ನು ಪಾಲು ಮಾಡುವ ಅಗತ್ಯವಿಲ್ಲ. ನಮಗೆ ಇಡೀ ಭೂಮಿ ಬೇಕು. ಕೇಂದ್ರ ಸರ್ಕಾರ ನಮ್ಮ ಆಶಯವನ್ನು ಈಡೇರಿಸಬೇಕು. ಕಬಳಿಸಿದ ಭೂಮಿಯಲ್ಲಿ ನಮಾಜ್ ಮಾಡುವುದನ್ನು ನಾವು ಒಪ್ಪಲ್ಲ. ಬಲವಂತವಾಗಿ ಆ ಭೂಮಿಯನ್ನು ಕಬಳಿಸಲಾಗಿದೆ. ಯಾರೊಬ್ಬರೂ ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಎಚ್ಚರಿಸಿದ್ದಾರೆ.

ಅಯೋಧ್ಯೆ ಹಿಂದೂಗಳ ಪವಿತ್ರ ಕ್ಷೇತ್ರವಾಗಿದೆ. ಹಾಗಾಗಿ ದೇವಾಲಯವನ್ನು ಮಾತ್ರ ಅಲ್ಲಿ ನಿರ್ಮಿಸಬೇಕು. ಭಾರತದಲ್ಲಿ ಬಾಬರಿ ಮಸೀದಿ ಎಂಬ ಹೆಸರೇ ಇಲ್ಲ. ಕೆಲವೊಬ್ಬರು ಹಿಂದೂಗಳನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ. ರಾಮ್ ಲಲ್ಲಾ ಈಗ ಲಾಕಪ್‍ನಲ್ಲಿದ್ದು ಅವನನ್ನು ನಾವು ದೇವಾಲಯದಲ್ಲಿಡಬೇಕಿದೆ ಎಂದು ಹೇಳಿದ್ದಾರೆ.

ಅಯೋಧ್ಯೆ ಬಡೇ ಭಕ್ತ್ ಮಹಲ್‍ನಲ್ಲಿ ವಿಎಚ್‍ಪಿ ಆಯೋಜಿಸಿರುವ ಧರ್ಮ ಸಭೆಯಲ್ಲಿ ಭಾಗವಹಿಸಲು ಸುಮಾರು 2 ಲಕ್ಷ ಮಂದಿ ಸೇರಿದ್ದಾರೆ. ಜನರು ಬೈಕ್, ವ್ಯಾನ್, ಶಾಲಾ ಬಸ್, ಟ್ರಕ್ ಮತ್ತು ಕಾರುಗಳಲ್ಲಿ ಆಗಮಿಸಿದ್ದಾರೆ.

ಬರಬಂಕಿ ಜಿಲ್ಲೆಯ ಜನರೂ ರ‍್ಯಾಲಿಯಲ್ಲಿ ಭಾಗವಹಿಸಲು ಆಗಮಿಸಿದ್ದಾರೆ. ಬಚ್ಚಾ ಬಚ್ಚಾ ರಾಮ್ ಕಾ, ಜನ್ಮಭೂಮಿ ಕಾ ಕಾಮ್ ಕಾ, ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ್ ಎಂಬ ಘೋಷಣೆ ಈದಿ ಅಯೋಧ್ಯೆಯಾಧ್ಯಂತ ಮೊಳಗಿದೆ.

Ayodhya,Ram Mandir,VHP,Dharma Sabha

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ