ಶಬರಿಮಲೆ ವಿವಾದ: ಕೇರಳದಲ್ಲಿ ಭುಗಿಲೆದ್ದ ಪ್ರತಿಭಟನೆಗೆ ಓರ್ವ ಬಲಿ

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಬಿಂದು ಹಾಗೂ ಕನಕದುರ್ಗಾ ಎಂಬ ಇಬ್ಬರು ಮಹಿಳೆಯರು ಮಫ್ತಿಯಲ್ಲಿದ್ದ ಪೊಲೀಸರ ರಕ್ಷಣೆಯಲ್ಲಿ ತೆರಳಿ, ಅಯ್ಯಪ್ಪಸ್ವಾಮಿ ದೇವರ ದರ್ಶನ ಪಡೆದ ಹಿನ್ನಲೆಯಲ್ಲಿ ಕೇರಳದಾದ್ಯಂತ ಪ್ರತಿಭಟನೆ ಭುಗಿಲೆದ್ದಿದ್ದು, ಪ್ರತಿಭಟನೆ ವಿಕೋಪಕ್ಕೆ ಶಬರಿಮಲೆ ಕರ್ಮ ಸಮಿತಿ ಕಾರ್ಯಕರ್ತ ಬಲಿಯಾಗಿದ್ದಾರೆ.

ಶಬರಿಮಲೆ ದೇವಾಲಯಕ್ಕೆ ಇಬ್ಬರು ಮಹಿಳೆಯರು ಪ್ರವೇಶಿಸಿರುವುದನ್ನು ವಿರೋಧಿಸಿ ಇಂದು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಕೇರಳ ಬಂದ್ ಗೆ ಕರೆ ನೀಡಿದ್ದು, ದೇವರನಾಡಿನಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ. ನಿನ್ನೆಯಿಂದಲೇ ಆರಂಭವಾಗಿರುವ ಘರ್ಷಣೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಈನಡುವೆ ನಿನ್ನೆ ಸಿಪಿಐಎಂ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದಿದ್ದ ಘರ್ಷಣೆಯಲ್ಲಿ ಶಬರಿಮಲೆ ಕರ್ಮ ಸಮಿತಿ ಕಾರ್ಯಕರ್ತ ಚಂದ್ರನ್​ ಉನ್ನಿತ್ತನ್(55)​ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಂದ್ರನ್ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ ತನಿಖೆ ಆರಂಭಿಸಿರುವ ಪೊಲೀಸರು ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಶಬರಿಮಲೆಗೆ ಮಹಿಳೆಯರ ಪ್ರವೇಶ ಖಂಡಿಸಿ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆಗೆ ಒತ್ತಾಯಿಸಿ ಶಬರಿಮಲೆ ಕ್ರಿಯಾ ಸಮಿತಿ ಇಂದು ರಾಜ್ಯವ್ಯಾಪಿ ಬಂದ್ ಆಚರಿಸಲಾಗುತ್ತಿದ್ದು, ಬಂದ್​ಗೆ ಬಿಜೆಪಿ ಸಂಪೂರ್ಣ ಬೆಂಬಲ ಘೊಷಿಸಿದ್ದು, ಬೆಳಗ್ಗೆ 6ರಿಂದಲೇ ಕೇರಳ ಸಂಪೂರ್ಣ ಬಂದ್​ ಆಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯಾದ್ಯಂತ ಬಿಗಿ ಪೊಲೀಸ್​ ಬಂದೋಬಸ್ತ್​ ಕಲ್ಪಿಸಲಾಗಿದ್ದು, ಘರ್ಷಣೆಗಳು ನಡೆಯದಂತೆ ಪೊಲೀಸರನ್ನು ನಿಯೋಜಿಸಲಾಗಿದೆ. ಬಂದ್​ನಿಂದ ರಾಜ್ಯದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

Sabarimala row,a 55 year old sabarimala-karma-samiti-worker dead,who was injured BJP-CPIM Clash

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ