ಸಿಬಿಎಸ್‌ಇ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಮತ್ತೆ ಮೂವರ ಬಂಧನ

ನವದೆಹಲಿ:ಏ-1: ಸಿಬಿಎಸ್‌ಇ 10ನೇ ತರಗತಿಯ ಗಣಿತ ಹಾಗೂ 12ನೇ ತರಗತಿಯ ಅರ್ಥಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮತ್ತೆ ಮೂವರನ್ನುಬಂಧಿಸಿದ್ದಾರೆ.

ಇಬ್ಬರು ಶಿಕ್ಷಕರು ಹಾಗೂ ಕೋಚಿಂಗ್‌ ಸೆಂಟರ್ ಮಾಲೀಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತರನ್ನು ಖಾಸಗಿ ಶಾಲಾ ಶಿಕ್ಷಕರಾದ ರಿಷಭ್, ರೋಹಿತ್‌ ಹಾಗೂ ಮತ್ತೋರ್ವ ಕೋಚಿಂಗ್‌ ಸೆಂಟರ್‌ ಮಾಲೀಕ ತೌಕೀರ್‌ ಎಂದು ಗುರುತಿಸಲಾಗಿದೆ. 12ನೇ ತರಗತಿಯ ಅರ್ಥಶಾಸ್ತ್ರ ಪ್ರಶ್ನೆ ಪತ್ರಿಕೆಯನ್ನು ಈ ಆರೋಪಿಗಳು ಸೋರಿಕೆ ಮಾಡಿದ್ದರು ಎಂದು ಹೇಳಲಾಗಿದೆ.

ಶಿಕ್ಷಕರಾದ ರಿಷಭ್ ಮತ್ತು ರೋಹಿತ್‌ ಪರೀಕ್ಷೆ ಆರಂಭಕ್ಕೂ ಅರ್ಧ ಗಂಟೆ ಮುನ್ನವೇ ಪ್ರಶ್ನೆ ಪತ್ರಿಕೆಗಳನ್ನು ಓಪನ್‌ ಮಾಡಿದ್ದರು. ಅಂತೆಯೇ ಪ್ರಶ್ನೆಪತ್ರಿಕೆ ಫೋಟೋ ಕ್ಲಿಕ್‌ ಮಾಡಿ ಕೋಚಿಂಗ್‌ ಸೆಂಟರ್‌ ಮಾಲೀಕ ತೌಕೀರ್‌ಗೆ ರವಾನಿಸಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇದೇ ವೇಳೆ 12ನೇ ತರಗತಿಯ ಹಿಂದಿ ಪ್ರಶ್ನೆಪತ್ರಿಕೆ ಕೂಡ ಸೋರಿಕೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಇದನ್ನು ಸಿಬಿಎಸ್‌ಇ ತಳ್ಳಿಹಾಕಿದ್ದು, ಫೇಸ್‌ಬುಕ್‌‌, ವಾಟ್ಸಪ್‌ನಲ್ಲಿ ಹಿಂದಿಯ ನಕಲಿ ಪ್ರಶ್ನೆಪತ್ರಿಕೆ ಹರಿದಾಡುತ್ತಿದೆ ಎಂದು ಸ್ಪಷ್ಟಪಡಿಸಿದೆ.

ಮಾರ್ಚ್‌ 26 ಮತ್ತು 28ರಂದು 12ನೇ ತರಗತಿಯ ಅರ್ಥಶಾಸ್ತ್ರ ಹಾಗೂ 10ನೇ ತರಗತಿಯ ಗಣಿತ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿರುವ ಆರೋಪ ಕೇಳಿಬಂದಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಈಗಾಗಲೇ ಕೋಚಿಂಗ್‌ ಸೆಂಟರ್‌ನವರು ಸೇರಿದಂತೆ 60ಕ್ಕೂ ಹೆಚ್ಚು ಜನರನ್ನು ವಿಚಾರಣೆಗೊಳಪಡಿಸಿದ್ದಾರೆ. ಅಲ್ಲದೇ, 50ಕ್ಕೂ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.

ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಏಪ್ರಿಲ್‌ 25ರಂದು 12ನೇ ತರಗತಿಯ ಅರ್ಥಶಾಸ್ತ್ರ ವಿಷಯದ ಮರು ಪರೀಕ್ಷೆ ನಡೆಸಲು ಸಿಬಿಎಸ್‌ಇ ಮುಂದಾಗಿದೆ.

CBSE Paper Leak Case, Three people, including two teachers, arrested

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ