ಹೈದ್ರಾಬಾದ್: ಜು-17:ಮಕ್ಕಳ ಕಳ್ಳನೆಂದು ಭಾವಿಸಿ ಟೆಕ್ಕಿ ಮಹಮ್ಮದ್ ಆಜಮ್ ರನ್ನು ಹೊಡೆದುಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಟೆಕ್ಕಿ ತಾಯಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದು, ನನ್ನ ಮಗ ಪಾಕಿಸ್ತಾನಕ್ಕೆ ಹೋಗಿರಲಿಲ್ಲ. ಕರ್ನಾಟಕಕ್ಕೆ ಹೋಗಿದ್ದ ಆದರೂ ಆತನನ್ನು ಹೊಡೆದು ಕೊಂದರು ಎಂದು ಹೇಳಿದ್ದಾರೆ.
ಹೈದರಾಬಾದ್ ನಲ್ಲಿ ಮಾತನಾಡಿದ ಟೆಕ್ಕಿ ಮಹಮದ್ ಆಜಮ್ ತಾಯಿ, ನನ್ನ ಮಗ ಸಾಫ್ಟ್ ವೇರ್ ಇಂಜಿನಿಯರ್. ಆತ ಎಂದೂ ಒಂದು ಸಣ್ಣ ಪ್ರಾಣಿಗೂ ಹಾನಿ ಮಾಡಿದವನಲ್ಲ. ಹೀಗಿರುವಾಗ ಮಕ್ಕಳನ್ನು ಹೇಗೆ ಕದಿಯಲು ಸಾಧ್ಯ. ಮಕ್ಕಳ ಕಳ್ಳ ಎಂದು ಭಾವಿಸಿ ಆತನನ್ನು ಹೊಡೆದು ಕೊಂದು ಹಾಕಿದ್ದಾರೆ. ಇದು ನಿಜಕ್ಕೂ ಅಕ್ಷ್ಯಮ್ಯ ಎಂದು ಕಣ್ಣೀರು ಹಾಕಿದ್ದಾರೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಹಮದ್ ಅಜಮ್ ಸಹೋದರಿ, ನನ್ನ ಸಹೋದರ 2 ವರ್ಷದ ಮಗುವಿನ ತಂದೆ. ತನ್ನ ಮೇಲೆ ದಾಳಿ ಮಾಡಲು ಬಂದ ಸ್ಥಳೀಯರಿಗೆ ಐಡಿ ಕಾರ್ಡ್ ತೋರಿಸಿದ್ದಾನೆ. ಹೀಗಿದ್ದೂ ಆತನನ್ನು ನಂಬದೇ ಆತನ ಮೇಲೆ ದಾಳಿ ಮಾಡಿದ್ದಾರೆ. ಆತನ ಮೇಲೆ ನಂಬಿಕೆ ಇಲ್ಲ ಎಂದ ಮೇಲೆ ಪೊಲೀಸರಿಗೆ ಒಪ್ಪಿಸಬಹುದಿತ್ತು. ಹೊಡೆದು ಕೊಲ್ಲುವಂತಹ ಅಪರಾಧ ನನ್ನಸಹೋದರ ಏನು ಮಾಡಿದ್ದ ಎಂದು ಆಕೆ ಪ್ರಶ್ನಿಸಿದ್ದಾರೆ.
ಶುಕ್ರವಾರ ಬೀದರ್ ಜಿಲ್ಲೆಯ ಮುರ್ಕಿ ಗ್ರಾಮದಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಟೆಕ್ಕಿ ಮಹಮದ್ ಅಜಮ್ ಮತ್ತು ಆತನ ಇತರೆ ನಾಲ್ಕು ಸ್ನೇಹಿತರನ್ನು ಸ್ಥಳೀಯ ಸುಮಾರು 2500ಕ್ಕೂ ಹೆಚ್ಚು ಜನ ಮಕ್ಕಳ ಕಳ್ಳರು ಎಂದು ಭಾವಿಸಿ ಹಲ್ಲೆ ಮಾಡಿದ್ದರು. ಈ ಪೈಕಿ ತೀವ್ರವಾಗಿ ಗಾಯಗೊಂಡಿದ್ದ ಟೆಕ್ಕಿ ಮಹಮದ್ ಅಜಮ್ ಸಾವನ್ನಪ್ಪಿದ್ದ.
Hyderabad,Techie Beaten To Death,Mob,Karnataka