ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಇಬ್ಬರು ಪ್ರತಿನಿಧಿಗಳನ್ನು ನೇಮಕ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು:ಜೂ-25: ಕಾವೇರಿ ನೀರು ನಿರ್ವಹಣಾ ಮಂಡಳಿಗೆ ರಾಜ್ಯ ಸರ್ಕಾರ ಇಬ್ಬರು ಪ್ರತಿನಿಧಿಗಳನ್ನು ನೇಮಕ ಮಾಡಿದ್ದು, ಈ ಮೂಲಕ ಕೇಂದ್ರ ಸರ್ಕಾರದ ವಿರುದ್ಧದ ಸಂಘರ್ಷ ಕೈಬಿಟ್ಟಿದೆ.

ಈ ಸಂಬಂಧ ಇಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್, ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಜಲ‌ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಹಾಗೂ ಕಾವೇರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಚ್ ಎಲ್ ಪ್ರಸನ್ನ ಅವರನ್ನು ರಾಜ್ಯದ ಪ್ರತಿನಿಧಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದರು.

ಇದೇ ವೇಳೆ ಕಾವೇರಿ ಕುರಿತ ಕಾನೂನು ಹೋರಾಟದ ಬಗ್ಗೆ ಚರ್ಚಿಸಲು ಪ್ರತಿಪಕ್ಷ ನಾಯಕರೊಂದಿಗೆ, ಸಂಸದರೊಂದಿಗೆ ಸಭೆ ನಡೆಸಲು ಸಿಎಂ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಜೂನ್ 1ರಂದು ಕೇಂದ್ರ ಸರ್ಕಾರ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಿತ್ತು. ಗೆಜೆಟ್ ನೋಟಿಫಿಕೇಷನ್ ಹೊರಡಿಸಿತ್ತು. ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ರಾಜ್ಯಗಳಿಗೆ ಪ್ರತಿನಿಧಿಗಳನ್ನು ನೇಮಿಸುವಂತೆ ಸೂಚನೆ ನೀಡಿತ್ತು.

Karnataka, Cauvery Water management board, representatives

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ