ನಗರದಲ್ಲಿ ಆಸ್ತಿ ತೆರಿಗೆ ಪಾವತಿಸಲು ನೀಡಲಾಗಿದ್ದ ವಿನಾಯ್ತಿ ರದ್ದು

ಬೆಂಗಳೂರು,ಜು.14-ನಗರದಲ್ಲಿ ಆಸ್ತಿ ತೆರಿಗೆ ಪಾವತಿಸಲು ನೀಡಲಾಗಿದ್ದ ವಿನಾಯ್ತಿಯನ್ನು ರದ್ದುಗೊಳಿಸಲಾಗಿದೆ. ಎಲ್ಲರೂ ಕಡ್ಡಾಯವಾಗಿ ತೆರಿಗೆ ಪಾವತಿಸಲೇಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಇಂದಿಲ್ಲಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಕಾಲದಲ್ಲಿ ಮೂರು ತಿಂಗಳವರೆಗೂ ಶೇ.5ರಷ್ಟು ವಿನಾಯ್ತಿ ನೀಡಲಾಗಿತ್ತು. ಇದೀಗ ವಿನಾಯ್ತಿ ರದ್ದುಪಡಿಸಲಾಗಿದ್ದು, ಎಲ್ಲರೂ ನಿಗದಿತ ಅವಧಿಯೊಳಗೆ ತೆರಿಗೆ ಪಾವತಿಸಲೇಬೇಕು ಎಂದರು.

ಆಸ್ತಿ ತೆರಿಗೆ ವಸೂಲಿಗೆ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆಲವು ಕಡೆ ವರ್ಗೀಕರಣ ಸಮರ್ಪಕವಾಗಿರಲಿಲ್ಲ. ಎಲ್ಲಿ ಲೋಪ ಕಂಡುಬಂದಿತೋ ಅಂತಹ ಆಸ್ತಿಗಳನ್ನು ಪತ್ತೆಹಚ್ಚಿ ಬಾಕಿ ಉಳಿಸಿಕೊಂಡಿರುವ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಲಾಗಿದೆ.

ಬಾಕಿ ಕಟ್ಟದಿದ್ದರೆ ಅಂಥವರ ಆಸ್ತಿಯನ್ನು ಸೀಜ್ ಮಾಡುವುದು ಇಲ್ಲವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.

ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ಆದ್ಯತೆ ನೀಡಲಾಗಿದೆ. ಇದುವರೆಗೂ 80 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ. ಈ ಆಂದೋಲನ ಪೂರ್ಣಗೊಂಡ ನಂತರ ಅವಶ್ಯಕತೆಗನುಗುಣವಾಗಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.

ಆದರೆ 45 ವರ್ಷ ಮೇಲ್ಪಟ್ಟವರಿಗೆ ಮೊದಲನೇ ಹಾಗೂ 2ನೇ ಡೋಸ್ ನೀಡಲಾಗುತ್ತಿದೆ. ಇದುವರೆಗೆ ಶೇ.56ರಷ್ಟು ಮಂದಿಗೆ ಲಸಿಕೆ ನೀಡಲಾಗಿದ್ದು, ಜುಲೈ ಅಂತ್ಯದ ವೇಳೆಗೆ ಶೇ.70ರಷ್ಟು ಲಸಿಕೆ ಹಾಕಿಸಲು ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.

ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುವವರನ್ನು ಪತ್ತೆಹಚ್ಚಲು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲಾಗುತ್ತಿದೆ. ನಗರದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ 3ನೇ ಹಂತದ ಅನ್‍ಲಾಕ್‍ನಲ್ಲಿ ಹಂತ ಹಂತವಾಗಿ ಕೆಲವು ವಲಯಗಳಿಗೆ ವಿನಾಯ್ತಿ ನೀಡಲಾಗುವುದು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ