ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿರುವುದನ್ನು ಬಿಟ್ಟರೆ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡಿಲ್ಲ; ಕುಮಾರಸ್ವಾಮಿ

ಬೆಂಗಳೂರು,ಜು.26- ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿರುವುದನ್ನು ಬಿಟ್ಟರೆ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಟೀಕಿಸಿದರು.

ಕಳೆದು ಎರಡು ವರ್ಷಗಳಲ್ಲಿ ಸರ್ಕಾರ ಮಾಡಿರುವ ಘೋಷಣೆಗಳೇ ಸಾಧನೆಯಾಗಿದೆ. ಅವುಗಳ ಸಮರ್ಪಕ ಅನುಷ್ಠಾನ ಆಗಿಲ್ಲ ಎಂದು ಅವರು ತಿಳಿಸಿದರು.

ಕೋವಿಡ್ ಸಂಕಷ್ಟ ಕಳೆದ ಎರಡು ವರ್ಷಗಳಿಂದಲೂ ರಾಜ್ಯವನ್ನು ಕಾಡುತ್ತಿದೆ. ಕಳೆದ ವರ್ಷ ಹಾಗೂ ಈ ವರ್ಷ ಸಂಕಷ್ಟದಲ್ಲಿರುವ ಜನರಿಗಾಗಿ ಮಾಡಿದ ವಿಶೇಷ ಪ್ಯಾಕೇಜ್‍ಗಳು ಕೂಡ ಸಮರ್ಪಕವಾಗಿ ತಲುಪಿಲ್ಲ. ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕವಾಗಿ ವ್ಯಾಪಕ ಆರೋಪ ಕೇಳಿಬರುತ್ತಿದೆ. ಅದನ್ನು ಕೂಡ ಸಾಧನೆ ಎಂದು ಬಿಂಬಿಸಿಕೊಳ್ಳಬಹುದಲ್ಲವೇ ಎಂದು ಪ್ರಶ್ನಿಸಿದರು.

ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಿ, ವಿರೋಧ ಪಕ್ಷಗಳ ಶಾಸಕರ ಕ್ಷೇತ್ರಗಳಿಗೆ ಅನುದಾನ ಕಡಿಮೆ ಒದಗಿಸಲಾಗಿದೆ. ಸರ್ಕಾರದ ಯೋಜನೆ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಅನುದಾನದ ಹಂಚಿಕೆಯಲ್ಲೂ ತಾರತಮ್ಯ ಮಾಡಲಾಗಿದೆ. ಇವೆಲ್ಲ ಸಾಧನೆಯೇ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿ ವರ್ಷ ಅತಿವೃಷ್ಟಿ, ಪ್ರವಾಹದಿಂದ ಸಾರ್ವಜನಿಕ ಆಸ್ತಿ, ಬೆಳೆ ಹಾನಿ ಉಂಟಾಗಿದೆ. ಅದನ್ನು ಕೂಡ ಸಮರ್ಪಕವಾಗಿ ನಿಭಾಯಿಸಿಲ್ಲ. ಸಾರ್ವಜನಿಕ ಆಸ್ತಿಗಳಾದ ಕೆರೆಕಟ್ಟೆ, ರಸ್ತೆ ದುರಸ್ತಿಗೂ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಇದನ್ನೆಲ್ಲ ಸಾಧನೆ ಎಂದು ಹೇಗೆ ಹೇಳುವುದು ಎಂದು ಪ್ರಶ್ನಿಸಿದರು.

ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯ ಹಣ ದುರುಪಯೋಗವಾಗಿದೆ. ಅದು ಕೂಡ ಸರಿಯಾಗಿ ಸದ್ಬಳಕೆಯಾಗಿಲ್ಲ. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸರ್ಕಾರದ ನ್ಯೂನತೆಗಳೇ ಎದ್ದು ಕಾಣುತ್ತದೆಯೇ ಹೊರತು ಸಾಧನೆಯೇನೂ ಕಾಣಿಸುತ್ತಿಲ್ಲ ಎಂದು ಅವರು ಆರೋಪಿಸಿದರು.

ಇನ್ನಾದರೂ ನಾಯಕತ್ವ ಗೊಂದಲವನ್ನು ಬಗೆಹರಿಸಿ ಜನರ ಸಮಸ್ಯೆ ಪರಿಹರಿಸುವಂತಹ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಿ.

ಅನುದಾನ ಹಂಚಿಕೆಯ ತಾರತಮ್ಯವನ್ನು ಸರಿಪಡಿಸಲಿ, ಜನರ ನಿರೀಕ್ಷೆಗೆ ತಕ್ಕಂತ ಆಡಳಿತ ನೀಡಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಿ ಎಂದು ಆಗ್ರಹಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ