ಅಭಿನಯ ಶಾರದೆ, ಬಹುಭಾಷಾ ನಟಿ ಕನ್ನಡ ಚಿತ್ರರಂಗದ ಮೇರು ತಾರೆ ಜಯಂತಿ ನಿಧನ

ಬೆಂಗಳೂರು,ಜು.26- ಅಭಿನಯ ಶಾರದೆ, ಬಹುಭಾಷಾ ನಟಿ ಕನ್ನಡ ಚಿತ್ರರಂಗದ ಮೇರು ತಾರೆ ಜಯಂತಿ(76) ತಡರಾತ್ರಿ ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಕಳೆದ ಎರಡು ವರ್ಷಗಳಿಂದ ಬಳಲುತ್ತಿದ್ದ ಅವರು ತಡರಾತ್ರಿ ನಮ್ಮನ್ನು ಅಗಲಿದರು. ಅವರ ಅಂತ್ಯಕ್ರಿಯೆ ಇಂದು ಸಂಜೆ ನೆರವೇರಲಿದೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದರು.

ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಇಡಲಾಗಿತ್ತು.

ಚಲನಚಿತ್ರರಂಗದ ಗಣ್ಯರು, ನಟ-ನಟಿಯರು, ಕಿರುತೆರೆ ಕಲಾವಿದರು, ರಾಜಕೀಯ ಮುಖಂಡರು ಸೇರಿದಂತೆ ಹಲವರು ಮೃತರ ಅಂತಿಮ ದರ್ಶನ ಪಡೆದು ಜಯಂತಿ ಅವರ ಗುಣಗಾನ ಮಾಡಿದರು. ಮೇರುನಟಿ ಜಯಂತಿ ನಿಧನಕ್ಕೆ ಕಂಬನಿ ಮಿಡಿದರು.

ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಭಾಷೆಗಳು ಸೇರಿದಂತೆ 500ಕ್ಕೂ ಹೆಚ್ಚು ಚಲನಚಿತ್ರಗಲ್ಲಿ ಜಯಂತಿ ನಟಿಸಿದ್ದಾರೆ.
ಕನ್ನಡದ ನಟಸಾರ್ವಭೌಮ ಡಾ.ರಾಜ್‍ಕುಮಾರ್ ಅವರ ಜೊತೆ 45ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಜಯಂತಿ ಅವರದು.

1945ರಲ್ಲಿ ಬಳ್ಳಾರಿಯಲ್ಲಿ ಜನಿಸಿದ್ದ ಜಯಂತಿ ಅವರ ಮೂಲ ಹೆಸರು ಕಮಲಕುಮಾರಿ. ಇವರ ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೆಂಟ್‍ಜೋಸೆಫ್ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದರೆ, ತಾಯಿ ಸಂತಾನಲಕ್ಷ್ಮಿ ಗೃಹಿಣಿಯಾಗಿದ್ದರು. ಮಕ್ಕಳ ಜೊತೆ ಚೆನ್ನೈಗೆ ತೆರಳಿ ಅಲ್ಲಿ ಕಮಲಕುಮಾರಿಯನ್ನು ನೃತ್ಯಶಾಲೆಗೆ ಸೇರಿಸಿದ್ದರು.

ಕಮಲಕುಮಾರಿ ಶಾಸ್ತ್ರೀಯ ನೃತ್ಯ ಕಲಿಯಾಗಬೇಕು ಎಂಬುದು ತಾಯಿಯ ಆಸೆಯಾಗಿತ್ತು. ಚಿಕ್ಕ ವಯಸ್ಸಿನಲ್ಲಿ ಚಿತ್ರೀಕರಣ ಸ್ಟುಡಿಯೋಗಳಿಗೆ ತೆರಳುತ್ತಿದ್ದ ಬಾಲಕಿ ಕಮಲಕುಮಾರಿಯನ್ನು ಖ್ಯಾತ ನಟ ಎನ್.ಟಿ.ರಾಮರಾವ್ ನೋಡಿದ್ದರು. ಒಮ್ಮೆ ಆಕೆಯನ್ನು ಕರೆದು ನನಗೆ ಹೀರೋಯಿನ್ ಆಗುತ್ತೀಯ ಎಂದು ಕೇಳಿದ್ದರು.

ಮುಂದೆ ಬಣ್ಣದ ಬದುಕಿಗೆ ಕಾಲಿಟ್ಟರು. ಜಯಂತಿ ಎಂದೇ ಜನಪ್ರಿಯರಾಗಿ ಎನ್.ಟಿ.ರಾಮರಾವ್ ಜೊತೆ ಜಗದೇಕ ವೀರುಣಿ ಕಥಾ, ಕುಲಗೌರವಂ, ಕೊಂಡವೀಟಿ ಸಿಂಹಂ, ಜಸ್ಟೀಸ್ ಚೌಧರಿ ಚಿತ್ರಗಳಲ್ಲಿ ಅಭಿನಯಿಸಿದರು.

ಮೊದಲು ತೆಲುಗು ಮತ್ತು ತಮಿಳಿನ ಕೆಲ ಚಿತ್ರಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದ ಕಮಲಕುಮಾರಿಗೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಅವಕಾಶ ನೀಡಿದ್ದು ನಿರ್ದೇಶಕ ವೈ.ಆರ್.ಸ್ವಾಮಿ. ಡ್ಯಾನ್ಸ್ ಕ್ಲಾಸ್‍ನಲ್ಲಿ ಕಮಲಾ ಕುಮಾರಿ ಅವರ ನೃತ್ಯ ನೋಡಿ ಜೇನುಗೂಡು ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ್ದರು.

ನಿರ್ದೇಶಕ ವೈ.ಆರ್.ಸ್ವಾಮಿ ಅವರೇ ಕಮಲಕುಮಾರಿಗೆ ಜಯಂತಿ ಎಂದು ಹೆಸರಿಟ್ಟರು. ಅಲ್ಲಿಂದ ಜಯಂತಿಯ ಪಯಣ ಕನ್ನಡ ಚಿತ್ರರಂಗದಲ್ಲಿ ಶುರುವಾಯಿತು. ಜೇನುಗೂಡು ಸಿನಿಮಾ ಹಿಟ್ ಆಯ್ತು. ಕನ್ನಡ ಚಿತ್ರರಂಗದಲ್ಲಿ ಜಯಂತಿ ಭದ್ರವಾಗಿ ನೆಲೆಯೂರಿದರು.

ಪರಕಾಯಪ್ರವೇಶದಂತೆ ಅಭಿನಯಿಸುತ್ತಿದ್ದ ಅವರು, ಚಿತ್ರರಂಗದಲ್ಲಿ ಬಹುಬೇಡಿಕೆಯಲ್ಲಿ ಇದ್ದಾಗಲೇ ಪುಟ್ಟಣ್ಣ ಕಣಗಲ್ ಅವರ ನಾಗರಹಾವು ಚಿತ್ರದ ಒಂದೇ ಒಂದು ಹಾಡಿನಲ್ಲಿ ಕಾಣಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದರು.

ಒನಕೆ ಓಬವ್ವ ಹಾಡಿನಲ್ಲಿ ಜಯಂತಿ ಅವರ ಅಭಿನಯ ಇಂದಿಗೂ ಜನಪ್ರಿಯ. ನಟಿ ಜಯಂತಿ ಆರು ಬಾರಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 1960ರಿಂದ 80ರ ದಶಕದವರೆಗೆ ಚಿತ್ರರಂಗದಲ್ಲಿ ಬೇಡಿಕೆ ಉಳಿಸಿಕೊಂಡಿದ್ದರು.

ಜೇನುಗೂಡು, ಬೆಟ್ಟದ ಹೂವು, ಎಡಕಲ್ಲಗುಡ್ಡದ ಮೇಲೆ, ಕಸ್ತೂರಿ ನಿವಾಸ ಮೊದಲಾದವುಗಳು ಅವರ ಪ್ರಮುಖ ಚಿತ್ರಗಳು.

ಕನ್ನಡದಲ್ಲಿ ಡಾ.ರಾಜ್‍ಕುಮಾರ್, ವಿಷ್ಣುವರ್ಧನ್, ಉದಯ್‍ಕುಮಾರ್, ಕಲ್ಯಾಣ್‍ಕುಮಾರ್, ಶ್ರೀನಾಥ್, ಅನಂತನಾಗ್ ಅವರ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದರು.

ನಿರ್ಮಾಪಕಿ, ನಿರ್ದೇಶಕಿಯೂ ಆಗಿರುವ ಇವರಿಗೆ 1965ರ ಮಿಸ್ ಲೀಲಾವತಿ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಬಂದಿದೆ. ಎರಡು ಮುಖ(1969), ಮನಸ್ಸಿನಂತೆ ಮಾಂಗಲ್ಯ(1976), ಧರ್ಮ ದಾರಿ ತಪ್ಪಿತು(1981), ಮಸಣದ ಹೂವು(1985), ಆನಂದ್(1989) ಚಿತ್ರಗಳ ಅಭಿನಯಕ್ಕಾಗಿ 5 ಬಾರಿ ರಾಜ್ಯ ಪ್ರಶಸ್ತಿ, ಡಾ.ರಾಜ್‍ಕುಮಾರ್ ಲೈಫ್‍ಟೈಮ್ ಅಚೀವ್‍ಮೆಂಟ್ ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಗಣ್ಯರ ಸಂತಾಪ: ಹಿರಿಯ ನಟಿ ಜಯಂತಿ ಅವರ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಗೋವಿಂದ ಕಾರಜೋಳ, ಲಕ್ಷ್ಮಣ್ ಸವದಿ, ಸಂಸದ ಬಿ.ಎನ್.ಬಚ್ಚೇಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ, ಸಚಿವರು, ಶಾಸಕರು, ಪರಿಷತ್ ಸದಸ್ಯರು, ವಿವಿಧ ರಾಜಕೀಯ ಮುಖಂಡರು, ಚಲನಚಿತ್ರ ನಟರಾದ ಶಿವರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್, ಖ್ಯಾತ ನಟಿ ಬಿ.ಸರೋಜಾದೇವಿ, ಲಕ್ಷ್ಮಿ, ಲೀಲಾವತಿ ಸೇರಿದಂತೆ ಹಲವು ನಟ-ನಟಿಯರು, ಗಣ್ಯರು, ಇಡೀ ಕನ್ನಡ ಚಲನಚಿತ್ರರಂಗದವರು ಸಂತಾಪ ಸೂಚಿಸಿ ಅಭಿನಯ ಶಾರದೆಗೆ ಅಂತಿಮ ನಮನ ಸಲ್ಲಿಸಿದ್ದಾರೆ.

ಎಲ್ಲಾ ಪಾತ್ರಗಳಲ್ಲಿ ಲೀಲಾಜಾಲವಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಜಯಂತಿ ಅವರ ನಿಧನದಿಂದ ನಾಡು ಅದ್ಭುತ ಕಲಾವಿದೆಯನ್ನು ಕಳೆದುಕೊಂಡಂತಾಗಿದೆ. ಭಗವಂತ ಅವರಿಗೆ ಶಾಂತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ