ನಿರಂತರವಾಗಿ ಸುರಿದ ಮಳೆಯಿಂದ ರಾಜ್ಯದ ಬಹುತೇಕ ನದಿಗಳು ಭರ್ತಿ

ಬೆಂಗಳೂರು, ಜು.24- ನಿರಂತರವಾಗಿ ಸುರಿದ ಮಳೆಯಿಂದ ರಾಜ್ಯದ ಬಹುತೇಕ ನದಿಗಳು ಮೈದುಂಬಿ ಹರಿಯುತ್ತಿದ್ದು, ಹಲವು ಜಲಾಶಯಗಳು ಭರ್ತಿಯಾಗುವ ಹಂತ ತಲುಪಿವೆ.

ಯಾವುದೇ ಕ್ಷಣದಲ್ಲಿ ಜಲಾಶಯಗಳಿಂದ ಹೊರ ಹರಿವು ಹೆಚ್ಚಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.

ಮಹಾರಾಷ್ಟ್ರ, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ನಿರಂತರ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಹಲವೆಡೆ ಅತಿವೃಷ್ಟಿ ಉಂಟಾಗಿ ನದಿಗಳು ಉಕ್ಕಿ ಹರಿಯತೊಡಗಿವೆ.

ಜಲಾಶಯಗಳ ಒಳಹರಿವು ಗಣನೀಯವಾಗಿ ಹೆಚ್ಚಳವಾಗಿದ್ದು, ಕೃಷ್ಣರಾಜ ಸಾಗರ ಜಲಾಶಯ ಹೊರತುಪಡಿಸಿ ರಾಜ್ಯದ ಬಹುತೇಕ ಪ್ರಮುಖ ಜಲಾಶಯಗಳು ಭರ್ತಿಯಾಗುವ ಹಂತ ತಲುಪಿವೆ.

ಜಲವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1802.60 ಅಡಿಗೆ ಏರಿಕೆಯಾಗಿದ್ದು, ಜಲಾಶಯಕ್ಕೆ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ಸ್ ನೀರು ಹರಿದುಬರುತ್ತಿದೆ.

ಇದೇ ರೀತಿ ಜಲಾಶಯಕ್ಕೆ ಒಳಹರಿವು ಬಂದರೆ ಜಲಾಶಯದ ನೀರಿನ ಗರಿಷ್ಠ ಮಟ್ಟ ತಲುಪುವ ಸಾಧ್ಯತೆಯಿದ್ದು, ಜಲಾಶಯದಿಂದ ನದಿಗೆ ಯಾವುದೇ ಕ್ಷಣದಲ್ಲಿ ನೀರು ಹರಿಸುವ ಸಾಧ್ಯತೆಯಿದ್ದು, ನದಿಪಾತ್ರದ ಜನರು ಅಗತ್ಯ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಂಬಂಧಪಟ್ಟ ಜಲಾಶಯದ ಇಂಜಿನಿಯರ್ ಪ್ರಕಟಣೆ ಹೊರಡಿಸಿದ್ದಾರೆ.

ಹೇಮಾವತಿ ಜಲಾಶಯದ ನೀರಿನ ಮಟ್ಟ 2911 ಅಡಿಗೆ ಏರಿಕೆಯಾಗಿದ್ದು, ಜಲಾಶಯಕ್ಕೆ 20 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹರಿದುಬರುತ್ತಿದ್ದು, ಸದ್ಯದಲ್ಲೇ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ.

ಹೀಗಾಗಿ ಯಾವುದೇ ಕ್ಷಣದಲ್ಲಿ ಜಲಾಶಯದ ಹೊರಹರಿವನ್ನು ಹೆಚ್ಚಿಸುವ ಸಾಧ್ಯತೆಯಿದ್ದು, ನದಿಪಾತ್ರದ ಜನರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ ಹಾಗೂ ತಗ್ಗುಪ್ರದೇಶಗಳ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹೇಮಾವತಿ ಯೋಜನಾ ವೃತ್ತದ ಅಧೀಕ್ಷಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಲವಿದ್ಯುತ್ ಉತ್ಪಾದಿಸುವ ಸೂಫಾ ಜಲಾಶಯಕ್ಕೂ 80 ಸಾವಿರ ಕ್ಯೂಸೆಕ್ಸ್‍ಗೂ ಅಧಿಕ ಹಾಗೂ ವರಾಹಿ ಜಲಾಶಯಕ್ಕೂ 9 ಸಾವಿರ ಕ್ಯೂಸೆಕ್ಸ್‍ಗೂ ಹೆಚ್ಚಿನ ನೀರು ಹರಿದುಬರುತ್ತಿದೆ.

ಹಾರಂಗಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಈಗಾಗಲೇ ನದಿಗೆ ಬಿಡಲಾಗುತ್ತಿದೆ. ಕೆಆರ್‍ಎಸ್ ಜಲಾಶಯದಲ್ಲಿ ನೀರಿನ ಮಟ್ಟ 106 ಅಡಿಗೆ ಏರಿಕೆಯಾಗಿದೆ. ಜಲಾಶಯಕ್ಕೆ 30 ಸಾವಿರ ಕ್ಯೂಸೆಕ್ಸ್ ಒಳಹರಿವಿದ್ದು, ಹೊರ ಹರಿವಿನ ಪ್ರಮಾಣವನ್ನು ಹೆಚ್ಚಿಸಲಾಗಿದೆ.

ಕಬಿನಿ ಜಲಾಶಯವು ಕೂಡ ಬಹುತೇಕ ಭರ್ತಿಯಾಗಿದ್ದು, ಜಲಾಶಯಕ್ಕೆ 20 ಸಾವಿರ ಕ್ಯೂಸೆಕ್ಸ್‍ಗೂ ಅಧಿಕ ಪ್ರಮಾಣದ ನೀರು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ.

ತುಂಗ ಜಲಾಶಯ ಈಗಾಗಲೇ ಭರ್ತಿಯಾಗುವ ಹಂತ ತಲುಪಿದೆ. ಅದೇ ರೀತಿ ತುಂಗಭದ್ರ, ಘಟಭದ್ರಾ,ಮಲಪ್ರಭಾ, ಆಲಮಟ್ಟಿ, ನಾರಾಯಣಪುರ ಜಲಾಶಯಗಳು ಭರ್ತಿಯಾಗುವ ಹಂತದಲ್ಲಿವೆ.

ಭದ್ರಾ ಜಲಾಶಯಕ್ಕೆ 39 ಸಾವಿರ ಕ್ಯೂಸೆಕ್ಸ್‍ಗೂ ಹೆಚ್ಚು ಒಳ ಹರಿವಿದ್ದರೆ, ತುಂಗಾಭದ್ರಾ ಜಲಾಶಯಕ್ಕೆ 44 ಸಾವಿರ ಕ್ಯೂಸೆಕ್ಸ್‍ಗೂ ಹೆಚ್ಚು ಒಳಹರಿವಿದೆ. ಘಟಪ್ರಭಾ ಜಲಾಶಯಕ್ಕೆ 53 ಸಾವಿರ ಕ್ಯೂಸೆಕ್ಸ್‍ನಷ್ಟು ಒಳಹರಿವಿದ್ದರೆ, ಮಲಪ್ರಭಾ ಜಲಾಶಯಕ್ಕೆ 33 ಸಾವಿರ ಕ್ಯೂಸೆಕ್ಸ್‍ನಷ್ಟು ಒಳಹರಿವಿದೆ.

ಆಲಮಟ್ಟಿ ಜಲಾಶಯಕ್ಕೂ ಭಾರೀ ಪ್ರಮಾಣದ ನೀರು ಹರಿದುಬರುತ್ತಿದ್ದು, ಒಂದು ಲಕ್ಷ ಕ್ಯೂಸೆಕ್ಸ್‍ಗೂ ಅಧಿಕ ನೀರನ್ನು ಹೊರಬಿಡಲಾಗಿದೆ.

ನಾರಾಯಣಪುರ ಜಲಾಶಯಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹರಿದುಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಯಿಂದ ಹೊರಬಿಡಲಾಗುತ್ತಿದೆ.

ಹೀಗಾಗಿ ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗುವ ಹಂತ ತಲುಪಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ