ಉದ್ಯಮ ಸ್ನೇಹಿ ವಾತಾವರಣ: ಆಂಧ್ರಪ್ರದೇಶಕ್ಕೆ ಅಗ್ರ ಸ್ಥಾನ, ತೆಲಂಗಾಣಕ್ಕೆ 2, ಕರ್ನಾಟಕಕ್ಕೆ?

ನವದೆಹಲಿ: ಅತ್ಯುತ್ತಮ ಉದ್ಯಮ ಸ್ನೇಹಿ ವಾತಾವರಣ ಇರುವ ರಾಜ್ಯಗಳ ಪಟ್ಟಿಯಲ್ಲಿ ಎರಡು ತೆಲುಗು ರಾಷ್ಟ್ರಗಳಿಗೆ ಮೊದಲ ಮತ್ತು 2ನೇ ಸ್ಥಾನ ದೊರೆತಿದ್ದು, ಹರ್ಯಾಣ ರಾಜ್ಯ ಮೂರನೇ ಸ್ಥಾನದಲ್ಲಿದೆ.
ಕೇಂದ್ರ ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆ  ನೂತನ ಉದ್ಯಮ ಸ್ಮೇಹಿ ವಾತಾವರಣವಿರುವ ರಾಜ್ಯಗಳ ಪಟ್ಟಿ ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಆಂಧ್ರ ಪ್ರದೇಶ ರಾಜ್ಯ ಅಗ್ರ ಸ್ಥಾನ ಸಂಪಾದಿಸಿದೆ. ಇನ್ನು ಮತ್ತೊಂದು ತೆಲುಗು ರಾಷ್ಟ್ರ ತೆಲಂಗಾಣ 2ನೇ ಸ್ಥಾನ ಪಡೆದಿದ್ದು, ರಾಜಧಾನಿ ದೆಹಲಿಗೆ ಸಮೀಪವಿರುವ ಹರ್ಯಾಣ ರಾಜ್ಯ ಮೂರನೇ ಸ್ಥಾನ ಪಡೆದಿದೆ ಎಂದು ತಿಳಿದುಬಂದಿದೆ.
ವಿಶ್ವಬ್ಯಾಂಕ್ ಮತ್ತು ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆ ಇಂದು ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಉಳಿದಂತೆ ಜಾರ್ಖಂಡ್ 4ನೇ ಸ್ಥಾನದಲ್ಲಿದ್ದು, ಗುಜರಾತ್ 5, ಛತ್ತೀಸ್ ಘಡ್ 6 ಮಧ್ಯ ಪ್ರದೇಶ 7 ಮತ್ತು ಕರ್ನಾಟಕ ರಾಜ್ಯ 8ನೇ ಸ್ಥಾನದಲ್ಲಿದೆ.  ಉಳಿದಂತೆ ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು 9 ಮತ್ತು 10 ಸ್ಥಾನದಲ್ಲಿದೆ.
ಕಣಿವೆ ರಾಜ್ಯ ಮೇಘಾಲಯಕ್ಕೆ ಪಟ್ಟಿಯಲ್ಲಿ 36ನೇ ಸ್ಥಾನ ಲಭಿಸಿದೆ. ಕೇಂದ್ರ ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆಯು ವಿಶ್ವಬ್ಯಾಂಕ್ ನೊಂದಿಗೆ ಜಂಟಿಯಾಗಿ ಈ ಸರ್ವೆ ಮಾಡಿದ್ದು, ಆಯಾ ರಾಜ್ಯ ಸರ್ಕಾರಗಳ ಕೈಗಾರಿಕಾ ನೀತಿ ಮತ್ತು ವಾಣಿಜ್ಯ ಸುಧಾರಣಾ ತಂತ್ರಗಾರಿಕೆಗಳ ಆಧಾರದ ಮೇಲೆ ಪಟ್ಟಿಯನ್ನು ತಯಾರು ಮಾಡಿದೆ ಎಂದು ತಿಳಿದುಬಂದಿದೆ.
ಇನ್ನು ಕಳೆದ 2017 ಆರ್ಥಿಕ ವರ್ಷದಲ್ಲಿ ಎಲ್ಲ ರಾಜ್ಯಗಳೂ ವಾಣಿಜ್ಯ ಸುಧಾರಣೆಯಲ್ಲಿ ಗಣನೀಯ ಸಾಧನೆ ಗೈದಿದ್ದು, ಆರ್ಥಿಕ ಮತ್ತು ವಾಣಿಜ್ಯ ಸುಧಾರಣಾ ಕ್ರಮಗಳ ಪಾತ್ರ ಇದರಲ್ಲಿ ಅಡಕವಾಗಿದೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ