ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡು ದೆಹಲಿಗೆ ತೆರಳಿರುವ ಅತೃಪ್ತ ಶಾಸಕರು ಸದ್ಯದಲ್ಲೇ ಮತ್ತೊಂದು ಸುತ್ತಿನ ಸಭೆ

ಬೆಂಗಳೂರ,ಆ.10-ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡು ದೆಹಲಿಗೆ ತೆರಳಿರುವ ಅತೃಪ್ತ ಶಾಸಕರು ಸದ್ಯದಲ್ಲೇ ಮತ್ತೊಂದು ಸುತ್ತಿನ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ.

ಸದ್ಯ ನವದೆಹಲಿಯಲ್ಲಿ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಸಿ.ಪಿ.ಯೋಗೇಶ್ವರ್ ಸೇರಿದಂತೆ ಮತ್ತಿತರರು ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ತಮಗಾಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಮನವಿ ಮಾಡಲಿದ್ದಾರೆ.

ಒಂದು ವೇಳೆ ರಾಷ್ಟ್ರೀಯ ನಾಯಕರಿಂದ ಯಾವುದೇ ರೀತಿಯ ಸೂಕ್ತ ಪ್ರತಿಕ್ರಿಯೆ ಬಾರದಿದ್ದರೆ ಬೆಂಗಳೂರಿಗೆ ಹಿಂತಿರುಗಿದ ಬಳಿಕ ಪ್ರತ್ಯೇಕ ಸಭೆ ನಡೆಸುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ತಮಗೆ ಮಂತ್ರಿ ಸ್ಥಾನ ನೀಡುವಂತೆ ರಾಷ್ಟ್ರೀಯ ನಾಯಕರ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿರುವ ರಮೇಶ್ ಜಾರಕಿಹೊಳಿ, ಯೋಗೇಶ್ವರ್,ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್, ಶಿವನಗೌಡ ನಾಯಕ್, ರಾಜುಗೌಡ ನಾಯಕ್, ಮಹೇಶ್ ಕುಮಟಳ್ಳಿ, ಶ್ರೀಮಂತ್ ಪಾಟೀಲ್, ಧುರ್ಯೋದನ ಐಹೊಳೆ, ರಾಜಕುಮಾರ್ ಪಾಟೀಲ್ ತೇಲ್ಕೂರ್, ದತ್ತಾತ್ರೇಯ ಪಾಟೀಲ್ ರೇವೂರ ಸೇರಿದಂತೆ ಮತ್ತಿತರರು ಪ್ರತ್ಯೇಕ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಸಚಿವ ಸ್ಥಾನವನ್ನು ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮಾನತೆ, ಪಕ್ಷ ನಿಷ್ಠೆ, ಪಕ್ಷಕ್ಕೆ ಸಲ್ಲಿಸಿರುವ ಸೇವೆ ಯಾವುದನ್ನು ಪರಿಗಣಿಸದೆ ಕೆಲವೇ ಸೀಮಿತರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಈ ಅನ್ಯಾಯವನ್ನು ಸರಿಪಡಿಸಬೇಕೆಂಬುದು ಶಾಸಕರ ಒತ್ತಾಯವಾಗಿದೆ.

ಈಗಾಗಲೇ ಒಂದು ಬಾರಿ ಮಾಜಿ ಸಚಿವರ ನಿವಾಸದಲ್ಲಿ ಸಭೆ ಸೇರಿದ್ದ ಅತೃಪ್ತ ಶಾಸಕರು ತಮ್ಮ ಮುಂದಿನ ನಡೆಗಳ ಬಗ್ಗೆ ಚರ್ಚೆ ನಡೆಸಿದ್ದರು. ಇವರ ಜೊತೆಗೆ ಸೂಕ್ತ ಖಾತೆ ಸಿಗದೆ ಅಸಮಾಧಾನಗೊಂಡಿರುವ ಸಚಿವರಾದ ಆನಂದ್ ಸಿಂಗ್, ಎಂಟಿಬಿ ನಾಗರಾಜ್ ಸೇರಿದಂತೆ ಮತ್ತಿತರರು ಭಾಗವಹಿಸುವ ಸಾಧ್ಯತೆ ಇದೆ.
ಒಂದೆರಡು ದಿನಗಳ ನಂತರ ಬೆಂಗಳೂರಿಗೆ ಹಿಂತಿರುಗಿದ ನಂತರ ಅತೃಪ್ತರು ಸಭೆ ನಡೆಸುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ರಮೇಶ್ ಜಾರಕಿಹೊಳಿ ಕಡೇಪಕ್ಷ ತಮ್ಮ ಸಹೋದರ ಬಾಲಚಂದ್ರ ಜಾರಕಿಹೊಳಿಯನ್ನಾದರೂ ಸಂಪುಟಕ್ಕೆ ತೆಗೆದುಕೊಳ್ಳಬೇಕೆಂದು ಪಟ್ಟು ಹಿಡಿದಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಾಯಕತ್ವ ಬದಲಾವಣೆಯಲ್ಲಿ ವರಿಷ್ಠರಿಗೆ ದೂರು ನೀಡಿದ್ದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಸಿ.ಪಿ.ಯೋಗೇಶ್ವರ್, ಅರವಿಂದ ಬೆಲ್ಲದ್ ಅವರುಗಳ ಪರಿಸ್ಥಿತಿ ಭಿನ್ನವಾಗಿಲ್ಲ.

ಅಸಮಾಧಾನಿತರನ್ನು ಕರೆದು ಮಾತನಾಡುವೆ. ಸಣ್ಣಪುಟ್ಟ ಗೊಂದಲಗಳಿದ್ದರೆ ಸರಿಪಡಿಸುತ್ತೇವೆ ಎಂದು ಸಿಎಂ ಬೊಮ್ಮಾಯಿ ಅವರು ಹೇಳುತ್ತಿರುವರಾದರೂ ಪರಿಸ್ಥಿತಿ ಮಾತ್ರ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿರುವುದು ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಸ್ಪಷ್ಟವಾದಂತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ